ಭಾರತೀಯ ವಾಯುಪಡೆಯ (IAF) ಹಾಲಿ ವಿಂಗ್ ಕಮಾಂಡರ್ ಒಬ್ಬರು, ಮಹಿಳೆಯೊಬ್ಬಳ ನಗ್ನ ಫೋಟೋಗಳ ಆಸೆಗೆ ಬಿದ್ದು ಭಾರತದ ಯುದ್ಧ ಯೋಜನೆಗಳು, ಲೇಹ್ ವಾಯುನೆಲೆಯ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ಡ್ರೋನ್(Drone) ಯುದ್ಧತಂತ್ರಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ(Pakistan) ಗುಪ್ತಚರ ಏಜೆಂಟ್‌ಗೆ ರವಾನಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ದೆಹಲಿ ಪೊಲೀಸರು(Delhi) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಈ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.
ದೆಹಲಿ ಪೊಲೀಸರ ವಿಶೇಷ ಘಟಕದ ಕೌಂಟರ್ ಇಂಟೆಲಿಜೆನ್ಸ್ ಏಜೆನ್ಸಿಯು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಈ ಚಾರ್ಜ್‌ಶೀಟ್ ಸಲ್ಲಿಸಿದೆ. ಅಧಿಕಾರಿಯ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಮಾಲ್‌ವೇರ್ (Malware) ಅಳವಡಿಸುವ ಮೂಲಕ, ಅವುಗಳಿಂದಲೂ ಗೌಪ್ಯ ಮಿಲಿಟರಿ ಮಾಹಿತಿಯನ್ನು ಕದಿಯಲು ಪಾಕಿಸ್ತಾನಿ ಹ್ಯಾಂಡ್ಲರ್ ಸಂಚು ರೂಪಿಸಿದ್ದಳು ಎಂಬುದನ್ನೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಮೇ 30ರಂದು ಬಂಧಿತನಾಗಿರುವ ಈ ಅಧಿಕಾರಿ, 2026ರ ಜನವರಿ 12ರಿಂದ ಏಪ್ರಿಲ್ 1ರವರೆಗೆ ಆ ಮಹಿಳೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯವು ಇನ್ನಷ್ಟೇ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಅಲ್ಲದೆ, ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಅನುಮತಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಚಾರ್ಜ್‌ಶೀಟ್‌ನಲ್ಲಿ ಏನಿದೆ?
ತನಿಖಾಧಿಕಾರಿಗಳ ಮಾಹಿತಿಯ ಪ್ರಕಾರ, ವಾಯುಪಡೆಯ ಯುದ್ಧ ಯೋಜನೆಗಳಿಗೆ ಸಂಬಂಧಿಸಿದ ಅತ್ಯಂತ ಗೌಪ್ಯ ಮಾಹಿತಿಯ ಜವಾಬ್ದಾರಿಯನ್ನು ಈ ಅಧಿಕಾರಿಗೆ ವಹಿಸಲಾಗಿತ್ತು. ಆದರೆ ಆತ ಲೇಹ್ ವಾಯುನೆಲೆಯ ವಿಮಾನ ಕಾರ್ಯಾಚರಣೆಯ ಸಾಮರ್ಥ್ಯ ಸೇರಿದಂತೆ ಹಲವು ವಿವರಗಳನ್ನು ಹಂಚಿಕೊಂಡಿದ್ದಾನೆ. ಲೇಹ್ ವಾಯುನೆಲೆಯನ್ನು ನಿತ್ಯವಲ್ಲದೆ ಆಗಾಗ್ಗೆ ಮಾತ್ರ ಬಳಸಲಾಗುತ್ತದೆ ಮತ್ತು ಅಲ್ಲಿಂದ ಎಲ್ಲಾ ಮಾದರಿಯ ಮಿಲಿಟರಿ ವಿಮಾನಗಳು ಟೇಕ್-ಆಫ್ ಆಗಬಲ್ಲವು ಎಂದು ಆತ ವಾಟ್ಸಾಪ್ ಸಂದೇಶಗಳಲ್ಲಿ ಆ ಮಹಿಳೆಗೆ ತಿಳಿಸಿರುವುದು ಪತ್ತೆಯಾಗಿದೆ. ಇದರೊಂದಿಗೆ ಭಾರತದ ಡ್ರೋನ್ ಯುದ್ಧ ಸಾಮರ್ಥ್ಯ ಮತ್ತು ಆ ಕಾರ್ಯಾಚರಣೆಗೆ ಸಂಬಂಧಿಸಿದ ಸಿಬ್ಬಂದಿಯ ವಿವರಗಳನ್ನೂ ಸೋರಿಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?
ವಾಯುಪಡೆಯ ಅತ್ಯಂತ ಗೌಪ್ಯ ಘಟಕವೊಂದರ ಮುಖ್ಯಸ್ಥನಾಗಿದ್ದ ಈ ಅಧಿಕಾರಿ, ರೇಸ್ ಕೋರ್ಸ್‌ನಲ್ಲಿರುವ ತನ್ನ ಕಚೇರಿಯಲ್ಲಿ ಅನಧಿಕೃತವಾಗಿ ಐಫೋನ್ (iPhone) ಬಳಸುತ್ತಿದ್ದುದು ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಂದಿತ್ತು. ಕರ್ತವ್ಯದ ಸೂಕ್ಷ್ಮತೆಯ ದೃಷ್ಟಿಯಿಂದ ಆತನಿಗೆ ಐಫೋನ್ ಹೊಂದಲು ಅನುಮತಿ ಇರಲಿಲ್ಲ. ಅನುಮಾನಗೊಂಡು ಆ ಫೋನ್ ಅನ್ನು ಪರಿಶೀಲಿಸಿದಾಗ, ಪಾಕಿಸ್ತಾನಿ ಏಜೆಂಟ್ ಜೊತೆಗಿನ ಸಂಭಾಷಣೆ ಮತ್ತು ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ವಿನಿಮಯವಾಗಿರುವುದು ಬಯಲಾಗಿದೆ.
ಪಾಕಿಸ್ತಾನದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದ ಆ ಮಹಿಳೆ, ಅಧಿಕಾರಿಯೊಂದಿಗೆ ವಾಟ್ಸಾಪ್ ಮೂಲಕ ಸಂಪರ್ಕ ಸಾಧಿಸಲು ಗುಜರಾತ್‌ನಲ್ಲಿ ವಿತರಿಸಲಾದ ಭಾರತೀಯ ಮೊಬೈಲ್ ಸಿಮ್ ಕಾರ್ಡ್ ಬಳಸುತ್ತಿದ್ದಳು. ಈ ಅಧಿಕಾರಿಯ ಮೂಲಕ ವಾಯುಪಡೆಯ ಇತರ ಸಿಬ್ಬಂದಿಯ ಬಳಿಯಿರುವ ಮಾಹಿತಿಯನ್ನೂ ಮಾಲ್‌ವೇರ್ ಮೂಲಕ ಕದಿಯಲು ಆಕೆ ಯತ್ನಿಸಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ಗುಪ್ತಚರ ಏಜೆಂಟ್‌ಗೆ ರಕ್ಷಣಾ ಇಲಾಖೆಯ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದ ಮೇಲೆ ಅಧಿಕಾರಿಯ ವಿರುದ್ಧ ‘ಅಧಿಕೃತ ರಹಸ್ಯಗಳ ಕಾಯ್ದೆ’ (Official Secrets Act) ಮತ್ತು ಇತರ ಸಂಬಂಧಿತ ಕಲಂಗಳನ್ನು ದಾಖಲಿಸಲಾಗಿದೆ.










