ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ರಾಹುಲ್ ಗಾಂಧಿ (Rahul Gandhi) ಮಾಡಿರುವ ಆರೋಪಗಳು ಬೇಜವಾಬ್ದಾರಿತನದಿಂದ ಕೂಡಿದ್ದು, ಅತ್ಯಂತ ಕೀಳುಮಟ್ಟದ ಹೇಳಿಕೆಗಳಾಗಿವೆ. ರಾಹುಲ್ ಗಾಂಧಿ ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್.ರವಿಕುಮಾರ್ (N Ravikumar) ಆಗ್ರಹಿಸಿದ್ದಾರೆ.
ಮಕ್ಕಳ ದಿನಾಚರಣೆಯಂದು ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ರಾಹುಲ್ ಗಾಂಧಿ ಅವರ ಮಾತುಗಳನ್ನು ಬಾಲಿಶ ಹಾಗೂ ಅಪಕ್ವ ಹೇಳಿಕೆಗಳೆಂದು ಪರಿಗಣಿಸಬೇಕೋ ಅಥವಾ ಶಿಷ್ಟಾಚಾರ ಮತ್ತು ಜವಾಬ್ದಾರಿಯ ಅರಿವಿಲ್ಲದ ವ್ಯಕ್ತಿಯ ಹೇಳಿಕೆಗಳೆಂದು ಗಂಭೀರವಾಗಿ ಪರಿಗಣಿಸಬೇಕೋ ಎಂಬ ಗೊಂದಲ ಮೂಡುತ್ತಿದೆ ಎಂದು ಟೀಕಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಅವರ ಆರೋಪ ಅತ್ಯಂತ ಕೀಳುಮಟ್ಟದ ಮತ್ತು ಆಧಾರರಹಿತ ಆರೋಪವಾಗಿದೆ. ಕಳೆದ 12 ವರ್ಷಗಳಿಂದ ಪ್ರಧಾನಮಂತ್ರಿಯಾಗಿ ಹಗಲಿರುಳು ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರು ಇಂದು ಜಾಗತಿಕ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ವ್ಯಕ್ತಿತ್ವ ಮತ್ತು ಸಾರ್ವಜನಿಕ ಜೀವನದ ದಾಖಲೆಯ ಬಗ್ಗೆ ದೇಶದ ಜನರಿಗೆ ವಿಶ್ವಾಸವಿದೆ. ಇಂತಹ ಕೀಳುಮಟ್ಟದ ತಂತ್ರಗಳಿಗೆ ಅವರು ಎಂದಿಗೂ ಮೊರೆ ಹೋಗುವುದಿಲ್ಲ ಎಂಬುದು 140 ಕೋಟಿ ಭಾರತೀಯರ ನಂಬಿಕೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಜವಾಬ್ದಾರಿಯಿಲ್ಲದೆ ಇಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದನ್ನು ರಾಹುಲ್ ಗಾಂಧಿ ನಿಲ್ಲಿಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇವಲ ಪ್ರಧಾನಮಂತ್ರಿಯವರಲ್ಲಿ ಮಾತ್ರವಲ್ಲದೆ, 140 ಕೋಟಿ ಭಾರತೀಯರಲ್ಲಿಯೂ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.










