ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆದು, ವಿಶೇಷವಾಗಿ ಕೈಗಾರಿಕಾ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ರೈತ ಕುಟುಂಬಗಳ ಯುವಕರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ್ (MB Patil) ಹೇಳಿದರು.
ಬಸವನ ಬಾಗೇವಾಡಿ (Basavana Bagewadi) ತಾಲೂಕಿನ ಮುಳವಾಡ (Muluwad) ಕೈಗಾರಿಕಾ ಪ್ರದೇಶದಲ್ಲಿ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಬೃಹತ್ ಕೈಗಾರಿಕಾ ಘಟಕ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ, ಅವರು ಮಾತನಾಡಿದರು. ಕೈಗಾರಿಕೆಗಳು ಕೇವಲ ಬೆಂಗಳೂರು ಸುತ್ತಮುತ್ತ ಸೀಮಿತವಾಗದೇ ಉತ್ತರ ಕರ್ನಾಟಕದ ವಿಜಯಪುರದಂತಹ ಜಿಲ್ಲೆಗಳಲ್ಲಿಯೂ ವ್ಯಾಪಕವಾಗಿ ಬೆಳೆಯಬೇಕು. ಸ್ಥಳೀಯ ಯುವಕರು ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಜಿಲ್ಲೆಯಲ್ಲಿಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ 10ರಿಂದ 12 ಸಾವಿರ ಉದ್ಯೋಗಗಳನ್ನು ಕಲ್ಪಿಸುವ ಸಂಕಲ್ಪ ಹೊಂದಲಾಗಿದೆ ಎಂದರು.
ಕೈಗಾರಿಕಾ ಯೋಜನೆಗಳಿಗಾಗಿ ಭೂಮಿ ನೀಡಿದ ರೈತರು ಹಾಗೂ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗಾವಕಾಶಗಳಲ್ಲಿ ಪ್ರಥಮ ಆದ್ಯತೆ ನೀಡಬೇಕು. ಸ್ಥಳೀಯ ನಿವಾಸಿಗಳಿಗೆ ಖಾಯಂ ಹುದ್ದೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಭೂಸ್ವಾಧೀನಕ್ಕೆ ಸಂಬಂಧಿಸಿದ ರೈತರ ಬಾಕಿ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ, ಅರ್ಹರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಿಲಯನ್ಸ್ ಗ್ರೂಪ್ ಸುಮಾರು 1,600 ಕೋಟಿ ರೂ,ಗೂ ಹೆಚ್ಚು ಬಂಡವಾಳ ಹೂಡಿಕೆಯೊಂದಿಗೆ ಘಟಕ ಸ್ಥಾಪಿಸುತ್ತಿದ್ದು, ಹೆಚ್ಚು ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುವುದರ ಜತೆಗೆ ಜಿಲ್ಲೆಯ ಆರ್ಥಿಕ ಬೆಳವಣಿಗೆಗೂ ಈ ಯೋಜನೆ ಮಹತ್ವದ ಕೊಡುಗೆ ನೀಡಲಿದೆ ಎಂದರು
ವಿಜಯಪುರ ಜಿಲ್ಲೆಯಲ್ಲಿ ಹಿಂದೆ ಕೈಗಾರಿಕೆಗಳ ಸ್ಥಾಪನೆಗೆ ಹಲವು ಅಡೆತಡೆಗಳಿದ್ದವು. ಇದೀಗ ಹೂಡಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಹಲವು ಪ್ರತಿಷ್ಠಿತ ಕಂಪನಿಗಳು ಜಿಲ್ಲೆಯಲ್ಲಿ ಘಟಕ ಸ್ಥಾಪಿಸಲು ಮುಂದೆ ಬಂದಿವೆ. ಟೆರಾ ಸರ್ಕ್ಯೂಟ್ಸ್, ಜನಿತ್ ಎನರ್ಜಿ ಸೊಲ್ಯೂಷನ್ಸ್ನ ವಿಂಡ್‌ಮಿಲ್ ಟವರ್ ತಯಾರಿಕಾ ಘಟಕಕ್ಕೆ 20 ಎಕರೆ ಭೂಮಿ ನೀಡಲಾಗಿದೆ. ಹೈಟೆಕ್ ಪೈಪ್ಸ್ ಸಂಸ್ಥೆಯೂ ಸುಮಾರು 250 ಕೋಟಿ ರೂ. ಹೂಡಿಕೆಯೊಂದಿಗೆ ಘಟಕ ಸ್ಥಾಪಿಸಲು ಮುಂದಾಗಿದೆ.
ಇದರ ಜೊತೆಗೆ ಮೇಟಾ ಗ್ರೂಪ್, ಯೂಲರ್ ಮೋಟಾರ್ಸ್, ಸುಜ್ಲಾನ್ ಎನರ್ಜಿ, ಎಜಾಕಿ, ವಿಂಗ್ಸ್ ವಿಟಾರಾ, ರೆಫೆಕ್ಸ್ ಇಂಡಸ್ಟ್ರೀಸ್, ಟೊಂಬೋ ಇಮೇಜಿಂಗ್, ಸರ್ವೋಟೆಕ್ ಪವರ್ ಸಿಸ್ಟಮ್ಸ್ ಹಾಗೂ ಹಿಂದೂಸ್ತಾನ್ ಕೋಕಾಕೋಲಾ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಹೂಡಿಕೆ ಮಾಡಲು ಆಸಕ್ತಿ ತೋರಿವೆ. ಇಟ್ಟಂಗಿಹಾಳದಲ್ಲಿ ಕೆಎಸ್‌ಡಿಎಲ್‌ನ ಎರಡನೇ ಘಟಕ ಸ್ಥಾಪನೆಯಾಗುತ್ತಿದ್ದು, ಇದರಿಂದ ಸುಮಾರು 500 ಜನರಿಗೆ ಉದ್ಯೋಗ ದೊರೆಯಲಿದೆ. ಈ ಎಲ್ಲ ಯೋಜನೆಗಳ ಮೂಲಕ ಜಿಲ್ಲೆಯನ್ನು ಪ್ರಮುಖ ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು









