2027ರ ಜನವರಿ 25ರಿಂದ ಫೆಬ್ರವರಿ 28ರವರೆಗೆ ದೇಶದ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿ ಕಾರ್ಯ ನಡೆಯಲಿದೆ. ಆದರೆ, ಮಣಿಪುರ, ಗೋವಾ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಹಾಗೂ ಲಡಾಖ್ ಅನ್ನು ಈ ವೇಳಾಪಟ್ಟಿಯಿಂದ ಹೊರಗಿಡಲಾಗಿದೆ.
ಇದರ ಜೊತೆಗೆ ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಹಿಮಪಾತದಿಂದ ಬಾಧಿತ, ಸಾಮಾನ್ಯ ವೇಳಾಪಟ್ಟಿಗೆ ಹೊಂದಿಕೆಯಾಗದ ಪ್ರದೇಶಗಳಲ್ಲಿಯೂ ಈ ಅವಧಿಯಲ್ಲಿ ಜನಗಣತಿ ನಡೆಯುವುದಿಲ್ಲ. ಮಣಿಪುರ ರಾಜ್ಯದಲ್ಲಿ ಜನಗಣತಿ ಕಾರ್ಯದ ಕುರಿತು ಮುಂದಿನ ದಿನಗಳಲ್ಲಿ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗುವುದು ಎಂದು ಮೃತ್ಯುಂಜಯ್ ಕುಮಾರ್ ನಾರಾಯಣ್ ತಿಳಿಸಿದ್ದಾರೆ.
ಜನವರಿ 10 ರಿಂದ 2 ವಾರ ಸ್ವಯಂ ಗಣತಿಗೆ ಅವಕಾಶ
ಮನೆಮನೆಗೆ ತೆರಳಿ ಜನಗಣತಿ ಕಾರ್ಯ ಆರಂಭಿಸುವುದಕ್ಕೂ ಮುನ್ನ ಸಾರ್ವಜನಿಕರಿಗೆ ಸ್ವತಃ ತಮ್ಮ ವಿವರಗಳನ್ನ ದಾಖಲಿಸುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 2027ರ ಜನವರಿ 10ರಿಂದ ಜನವರಿ 24ರವರೆಗೆ ಸ್ವಯಂ ಗಣತಿ (Self-Enumeration)ಗೆ ಅವಕಾಶ ಇರಲಿದೆ. ಈ ಅವಧಿಯಲ್ಲಿ ಜನರು ತಮ್ಮ ಅಗತ್ಯ ಮಾಹಿತಿಗಳನ್ನ ಸ್ವತಃ ಸಲ್ಲಿಸಬಹುದಾಗಿದೆ. ಜನವರಿ 24ರಂದು ಸ್ವಯಂ ಗಣತಿ ಮುಕ್ತಾಯಗೊಳ್ಳಲಿದ್ದು, ಬಳಿಕ ಮನೆ ಮನೆ ಗಣತಿ ಶುರುವಾಗಲಿದೆ.
ಮಾರ್ಚ್ 1 ರಿಂದ 5ರವರೆಗೆ ಪರಿಷ್ಕರಣಾ ಸುತ್ತು
ಮುಖ್ಯ ಜನಗಣತಿ ಕಾರ್ಯ ಪೂರ್ಣಗೊಂಡ ಬಳಿಕ ಮಾರ್ಚ್ 1ರಿಂದ ಮಾರ್ಚ್ 5, 2027ರ ವರೆಗೆ ಪರಿಷ್ಕರಣಾ ಸುತ್ತು (Revisional Round) ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.










