ʻನಮ್ಮ ಜೀವನದ ಮಹತ್ವದ ಸಮಯವನ್ನ ಒಟ್ಟಿಗೆ ಕಳೆದ ಬಳಿಕ, ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ದಾಂಪತ್ಯ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಹಾಗೂ ನಮ್ಮ ಮಕ್ಕಳಿಗೆ ಸಮರ್ಪಿತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಮೊದಲ ಆದ್ಯತೆಯಾಗಿರಲಿದೆʼ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ತಮ್ಮ ವೈಯಕ್ತಿಕ ಬದುಕಿನ ಈ ಬದಲಾವಣೆಯ ಸಂದರ್ಭದಲ್ಲಿ ಗೌಪ್ಯತೆಯನ್ನ ಗೌರವಿಸುವಂತೆ ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ಮನವಿ ಮಾಡಿದ್ದಾರೆ. ಇದುವರೆಗೆ ತಮ್ಮೊಂದಿಗೆ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಪವನ್ ಕಲ್ಯಾಣ್ 3ನೇ ಪತ್ನಿಯೂ ದೂರ!
ಟಾಲಿವುಡ್‌ನ ಖ್ಯಾತ ನಟ ಪವನ್ ಕಲ್ಯಾಣ್ ಅವರು ಮೆಗಾಸ್ಟಾರ್ ಚಿರಂಜೀವಿ ಹಾಗೂ ನಾಗೇಂದ್ರ ಬಾಬು ಅವರ ಕಿರಿಯ ಸಹೋದರ. 1996ರಲ್ಲಿ ‘ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
1997ರಲ್ಲಿ ನಂದಿನಿ ಅವರನ್ನ ವಿವಾಹವಾಗಿದ್ದ ಅವರು, ಬಳಿಕ ಅವರಿಂದ ಬೇರೆಯಾಗಿದ್ದರು. ನಂತರ ನಟಿ ಹಾಗೂ ಮಾಡೆಲ್ ರೇಣು ದೇಸಾಯಿ ಅವರನ್ನ 2009ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಅಖಿರಾ ನಂದನ್ ಮತ್ತು ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. 2012ರಲ್ಲಿ ಈ ಜೋಡಿ ಪ್ರತ್ಯೇಕವಾಗಿತ್ತು. ಇದಾದ ಬಳಿಕ ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನ ಪ್ರೀತಿಸಿ, 2013ರ ಸೆಪ್ಟೆಂಬರ್‌ನಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಅನ್ನಾ ಕೊನಿಡೆಲಾ ಎಂದೇ ಗುರುತಿಸಿಕೊಂಡಿದ್ದರು. ಈ ದಂಪತಿಗೆ ಪೊಲೆನಾ ಅಂಜನಾ ಪವನೋವಾ ಎಂಬ ಪುತ್ರಿ ಹಾಗೂ ಮಾರ್ಕ್ ಶಂಕರ್ ಪವನೋವಿಚ್ ಎಂಬ ಪುತ್ರನಿದ್ದಾರೆ.
2011ರಲ್ಲಿ ಬಿಡುಗಡೆಯಾದ ಪವನ್ ಕಲ್ಯಾಣ್ ಅಭಿನಯದ ‘ತೀನ್ ಮಾರ್’ ಚಿತ್ರದಲ್ಲಿ ಅನ್ನಾ ಕೂಡ ನಟಿಸಿದ್ದರು. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಬಳಿಕ 2013ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಇದೀಗ 13 ವರ್ಷಗಳ ಬಳಿಕ ಪ್ರತ್ಯೇಕವಾಗುವ ನಿರ್ಧಾರ ಪ್ರಕಟಿಸಿದೆ.










