ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಈಚೆಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಕನ್ನಡಿಗರಿಗೆ ನ್ಯಾಯ ಸಿಗಬೇಕು ಎಂಬುದು ನನ್ನ ನಿಲುವು. ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ವಿವಿಧ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ದಯಮಾಡಿ 2023ರಲ್ಲಿ ಚುನಾವಣೆ ಪೂರ್ವದಲ್ಲಿ ಹೊರಡಿಸಿದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿ, ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಎಲ್ಲ ಹಂತದ ಉದ್ಯೋಗಾವಕಾಶಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಿರಿ. ನಾಲ್ಕು ವರ್ಷಗಳಾದರೂ ಅದು ಈಡೇರಿಲ್ಲ. ಇದಕ್ಕಿಂತ ದೊಡ್ಡ ಆದ್ಯತೆಯ ವಿಷಯ ಇನ್ನೊಂದಿರಲು ಸಾಧ್ಯವಿಲ್ಲ. ಯಾಕೆಂದರೆ ಇದು ಕನ್ನಡದ ಮಕ್ಕಳ ಭವಿಷ್ಯದ ಪ್ರಶ್ನೆ ಎಂದಿದ್ದಾರೆ.
ನೀವು ಈ ಬೇಡಿಕೆಯನ್ನು ಈಡೇರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ ನಡೆಸುವ ಅಗತ್ಯವೂ ಇರುವುದಿಲ್ಲ. ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಇಟ್ಟು ನೀವೇ ನೀಡಿದ ಭರವಸೆಯನ್ನು ಈಡೇರಿಸಿಬಿಡಿ. ನಾವು ಲಕ್ಷಾಂತರ ಕನ್ನಡದ ಮಕ್ಕಳನ್ನು ಸೇರಿಸಿ ಇಡೀ ಸರ್ಕಾರಕ್ಕೆ ಒಂದು ಅಭಿನಂದನಾ ಸಭೆ ನಡೆಸುತ್ತೇವೆ.
ನೀವು ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದಾಗಲೇ ಈ ಪ್ರಣಾಳಿಕೆ ರೂಪುಗೊಂಡಿದೆ. ನೀವು ಅಪಾರವಾದ ಕನ್ನಡ ಪ್ರೇಮವನ್ನು ಇಟ್ಟುಕೊಂಡವರು ಎಂಬುದು ನನಗೆ ಖಚಿತವಾಗಿ ಗೊತ್ತಿದೆ. ಈ ಕಾರಣದಿಂದಲೇ ನಿಮ್ಮ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಲಾಗಿತ್ತು ಎಂಬುದನ್ನೂ ನಾನು ಬಲ್ಲೆ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀವು ಕೊಟ್ಟ ಭರವಸೆಗಳೇ ನಿಮ್ಮ ಸರ್ಕಾರದ ಪ್ರಮುಖ ಧ್ಯೇಯವಾಕ್ಯಗಳಾಗಬೇಕು.
ಕೊಟ್ಟ ಭರವಸೆಗಳನ್ನು ಈಡೇರಿಸುವುದು ಸಾಂವಿಧಾನಾತ್ಮಕ ಕರ್ತವ್ಯ ಮಾತ್ರವಲ್ಲ, ನೈತಿಕ ಕರ್ತವ್ಯವೂ ಕೂಡ ಹೌದು. ನಾಲ್ಕು ವರ್ಷಗಳಾದರೂ ಈ ಬೇಡಿಕೆ ಈಡೇರಿಲ್ಲ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸರ್ಕಾರದ ಸಚಿವ ಸಂಪುಟ ಈ ಕಾಯ್ದೆಗೆ ಅನುಮೋದನೆ ನೀಡಿತ್ತು. ಆದರೆ ಮುಂದಿನ ಪ್ರಕ್ರಿಯೆ ನಡೆಯಲಿಲ್ಲ. ದಯಮಾಡಿ ಈ ಭರವಸೆ ಈಡೇರಿಸಿಬಿಡಿ, ಕರ್ನಾಟಕದ ಜನತೆಗೆ ಇದೇ ನೀವು ಕೊಡುವ ದೀಪಾವಳಿಯ ಕೊಡುಗೆಯಾಗುತ್ತದೆ.
ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಶೇ.80 ರಷ್ಟು ಉದ್ಯೋಗ ಕೊಡುವ ವಿಷಯದಲ್ಲಿ ನಿಮಗೆ ಯಾರ ವಿರೋಧವೂ ಇರಲು ಸಾಧ್ಯವಿಲ್ಲ. ಸ್ವತಃ ನಿಮ್ಮ ಸಂಪುಟದ ಸದಸ್ಯರಾದ ಮಾನ್ಯ ಐಟಿಬಿಟಿ, ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರುವುದು ನಮ್ಮ ಬದ್ಧತೆ, ಅದನ್ನು ತಂದೇ ತರುತ್ತೇವೆ ಎಂದು ಇತ್ತೀಚಿಗೆ ಹೇಳಿದ್ದಾರೆ. ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ. ವಿರೋಧ ಪಕ್ಷಗಳ ನಾಯಕರೂ ಸಹ ಇದೇ ಮಾತುಗಳನ್ನು ಹಿಂದೆ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ನಮ್ಮ ಆಗ್ರಹ ಅಭಿಯಾನವನ್ನು ಬೆಂಬಲಿಸಿರುವುದನ್ನು ನೀವು ಗಮನಿಸಿರುತ್ತೀರಿ ಎಂದು ಭಾವಿಸುತ್ತೇನೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರೂ ಸಹ ಹಿಂದೆ ಖಾಸಗಿ ವಲಯದಲ್ಲಿ ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಕಾಯ್ದಿರಿಸುವ ವಿಷಯದಲ್ಲಿ ತಮ್ಮ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದರು. ಇಷ್ಟಾದ ಮೇಲೂ ಯಾರಿಗಾದರೂ ತಕರಾರು ಇದ್ದರೆ ನಾನು ವಿರೋಧ ಪಕ್ಷದ ನಾಯಕರ ಬಳಿಗೆ ತೆರಳಿ ಅವರಿಗೆ ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆ ವಿಷಯದಲ್ಲಿ ಮನವಿ ಮಾಡುವ, ಮನವೊಲಿಸುವ ಕಾರ್ಯ ಮಾಡುತ್ತೇನೆ. ಅವರೂ ಸಹ ಖಂಡಿತವಾಗಿಯೂ ಇದನ್ನು ಬೆಂಬಲಿಸುತ್ತಾರೆ.
ಇಷ್ಟೆಲ್ಲ ಇರುವಾಗ ಕೆಲವೇ ಕೆಲವು ಬೆರಳೆಣಿಕೆಯ, ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳ ಒತ್ತಡಕ್ಕೆ ನೀವು ಮಣಿಯಕೂಡದು. ನಿಮ್ಮ ಹಠ, ಛಲವನ್ನು ನಾನು ಬಲ್ಲೆ. ಇಂಥ ಬ್ಲಾಕ್ ಮೇಲ್ ಗಳನ್ನು ನೀವು ಮೆಟ್ಟಿನಿಲ್ಲುವ ಶಕ್ತಿ, ಸ್ಥೈರ್ಯ ಹೊಂದಿದವರು. ನಿಮ್ಮ ಕಾಲದಲ್ಲಿ ಈ ಕಾಯ್ದೆ ಜಾರಿಗೆ ಬಂದರೆ ಕನ್ನಡಿಗರು ನಿಮ್ಮನ್ನು ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುತ್ತಾರೆ. ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗುತ್ತದೆ. ಕನ್ನಡದ ಮಕ್ಕಳಿಗೆ ಅತಿದೊಡ್ಡ ಸಾಕ್ಷಿಗುಡ್ಡೆಯನ್ನು ನೀವು ಬಿಟ್ಟು ಹೋದಂತೆ ಆಗುತ್ತದೆ.
ನವೆಂಬರ್ 1ರಿಂದ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ʻಆಗ್ರಹ ಅಭಿಯಾನʼದ ಭಾಗವಾಗಿ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ.
ಹಿಂದೆ ತಮ್ಮ ಸರ್ಕಾರದ ಕಾರ್ಮಿಕ ಇಲಾಖೆ ಇಂಥದ್ದೇ ಒಂದು ಸಮೀಕ್ಷೆ ನಡೆಸಲು ಮುಂದಾದಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮೀಕ್ಷೆ ನಡೆಯದಂತೆ ತಡೆದವು ಎಂಬುದನ್ನು ನಾನು ಕೇಳಿದ್ದೇನೆ. ನಾವು ಈಗ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ.
ನಮ್ಮ ಸಮೀಕ್ಷೆಯಲ್ಲಿ ದೊರೆಯುವ ನೈಜ ಅಂಕಿ ಅಂಶಗಳನ್ನು ನಾವು ವರದಿಯ ರೂಪದಲ್ಲಿ ತಮಗೇ ಸಲ್ಲಿಸುತ್ತೇವೆ. ಈಗ ನಮ್ಮ ಅಭಿಯಾನಕ್ಕೆ ಖಾಸಗಿ ಸಂಸ್ಥೆಗಳ ಮುಖ್ಯಸ್ಥರುಗಳು ಆಶಾದಾಯಕವಾಗಿ ಸ್ಪಂದಿಸುತ್ತಿರುವಾಗ, ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆಯನ್ನು ಜಾರಿಗೆ ತರಲು ಇದು ಸಕಾಲ. ದಯಮಾಡಿ ತಾವು ಈ ಕಾಯ್ದೆಯನ್ನು ಜಾರಿಗೊಳಿಸಿ ಎಂದು ಮತ್ತೊಮ್ಮೆ ವಿನಮ್ರವಾಗಿ ಮನವಿ ಮಾಡುತ್ತೇನೆ ಎಂದೂ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಹೇಳಿದ್ದಾರೆ.










