ವಿಧಾನ ಪರಿಷತ್ ಚುನಾವಣೆ (MLC Election) ಫಲಿತಾಂಶ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಸೋತಿರುವ ಪರಿಣಾಮವಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಲಿನ ದರ ಎಂಟು ರೂ. ಏರಿಕೆ ನಿರ್ಧಾರ ಮಾಡಿದಂತೆ ಕಾಣುತ್ತಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಹಾಸನ (Hassan) ಜಿಲ್ಲೆಯ ಆಲೂರು ತಾಲ್ಲೂಕಿನ ದಿಂಡಿಘಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಸೋತಿರುವ ಪರಿಣಾಮವಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಲಿನ ದರ ಎಂಟು ರೂ. ಏರಿಕೆ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಈ ಮಧ್ಯೆ ರೈತರಿಗೆ ಏಳು ರೂ. ಜಾಸ್ತಿ ಕೊಡ್ತರೆ ಎಂದರೆ ಸಂತೋಷ ಎಂದು ತಿಳಿಸಿದ್ದಾರೆ.
ಒಂದು ಕಡೆ ಭೀಕರ ಬರಗಾಲವಿದೆ. ರೈತರಿಗೆ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ಕೊಡಬೇಕೆಂದು ಬಿಜೆಪಿ ಒತ್ತಾಯ ಮಾಡಿತ್ತು. ಬರಗಾಲದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಹೈನುಗಾರಿಕೆಗೆ ಪ್ರೋತ್ಸಾಹ ಕೊಡಲು ನಾಲ್ಕು ರೂ.ಗೆ ಏರಿಸಿದ್ರು, ಅದರದ್ದೇ 800-900 ಕೋಟಿ ರೂ.ಯನ್ನು ಈ ಬರಗಾಲದ ಸಂದರ್ಭದಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ. ಇದರ ಮಧ್ಯೆ ರೈತರಿಗೆ ಏಳು ರೂ ಜಾಸ್ತಿ ಕೊಡ್ತರೆ ಎಂದರೆ ಸಂತೋಷ. ಆದರೆ ಗ್ರಾಹಕರ ಮೇಲೆ ಏಕೆ ಬರೆ ಹಾಕ್ತೀರಿ. ರಾಜ್ಯ ಸರ್ಕಾರ ಹಣ ತುಂಬಲಿ, ಜವಾಬ್ದಾರಿ ತೆಗೆದುಕೊಳ್ಳಲಿ ಎಂದಿದ್ದಾರೆ.
ಮತ್ತೊಂದೆಡೆ ಬಸ್‌ನ ದರ ಜಾಸ್ತಿ ಮಾಡ್ತಿರಿ ಅಂದರೆ ಕಳೆದ ಮೂರುವರೆ ವರ್ಷ ಏನು ಕಡಿದು ಕಟ್ಟೆ ಹಾಕಿದ್ದಾರೆ. ನಾಲ್ಕೈದು ಬಾರಿ ಪೆಟ್ರೋಲ್, ಡಿಸೇಲ್ ಮೇಲೆ ಟ್ಯಾಕ್ಸ್ ಜಾಸ್ತಿ ಮಾಡಿದ್ರು ರಾಜ್ಯ ಸರ್ಕಾರ, ಒಂದೆಡೆ ಗ್ಯಾರಂಟಿ, ಶಕ್ತಿ ಯೋಜನೆ ಅಂತೀರಾ, ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ಬಸ್‌ಗಳು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿ ಗ್ರಾಹಕರ ಮೇಲೆ ಬರೆ ಎಳೆಯುವಂತಹ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.










