ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ (Flydubai) ವಿಮಾನದ ಕಾಕ್ಪಿಟ್ನಲ್ಲಿ ನಡೆದ ಹಲ್ಲೆಯ ಘಟನೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಧಿಕೃತವಾಗಿ ಭಯೋತ್ಪಾದಕ ಕೃತ್ಯ(Terrorist Act) ಎಂದು ಕರೆದಿದೆ.
ಘಟನೆಯ ಉದ್ದೇಶ ಹಾಗೂ ಹಿನ್ನೆಲೆಯ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿರುವ ಬೆನ್ನಲ್ಲೇ, ಗಂಭೀರ ಅಪಾಯದ ನಡುವೆಯೂ ಪರಿಸ್ಥಿತಿಯನ್ನು ನಿಯಂತ್ರಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸ ಮತ್ತು ಜವಾಬ್ದಾರಿಯನ್ನು ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಾಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅನ್ವರ್ ಗರ್ಗಾಶ್, ಕ್ಯಾಪ್ಟನ್ ಸ್ಮಿತ್ ಮಚ್ಚರ್(Smit Machchhar) ಅವರನ್ನು ನಿಜವಾದ ಹೀರೊ ಎಂದು ಕರೆದಿದ್ದಾರೆ. “ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅತ್ಯುನ್ನತ ಗೌರವಕ್ಕೆ ಅರ್ಹರು. ಗಂಭೀರ ಭಯೋತ್ಪಾದಕ ಕೃತ್ಯ ಹಾಗೂ ಸಂಭವನೀಯ ಭಾರೀ ದುರಂತವನ್ನು ಎದುರಿಸುವಲ್ಲಿ ಅವರು ತೋರಿದ ಧೈರ್ಯ, ನೈತಿಕ ಹೊಣೆಗಾರಿಕೆ ಮತ್ತು ವೃತ್ತಿಪರತೆ ಮೆಚ್ಚುವಂಥದ್ದು,” ಎಂದು ತಿಳಿಸಿದ್ದಾರೆ










