ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ರೋಹಿತ್ ಶರ್ಮಾ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕನಾಗಿ ಮರಳಿದ್ದಾರೆ.
ಮುಂಬರುವ ಐಪಿಎಲ್ 20ನೇ ಸೀಸನ್‌ನಲ್ಲಿ (2027) ರೋಹಿತ್ ಶರ್ಮಾ (Rohit Sharma) ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ.
2024ರಿಂದ 2026ರವರೆಗೆ ಮೂರು ಸೀಸನ್‌ಗಳಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಫ್ರಾಂಚೈಸಿ ಟ್ರೇಡ್ (Trade) ಮೂಲಕ ಪಂಜಾಬ್ ಕಿಂಗ್ಸ್ (Punjab Kings) ತಂಡಕ್ಕೆ ಬಿಟ್ಟುಕೊಟ್ಟಿದೆ. ಹಾರ್ದಿಕ್ ಬದಲಿಗೆ ಟೀಮ್ ಇಂಡಿಯಾದ ಸ್ಟಾರ್ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. 2024ರಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ತಂಡ, 2026ರ ಸೀಸನ್‌ನಲ್ಲೂ 9ನೇ ಸ್ಥಾನಕ್ಕೆ ಕುಸಿದು ತೀವ್ರ ನಿರಾಸೆ ಮೂಡಿಸಿತ್ತು.
2028ರ ಮೆಗಾ ಹರಾಜಿಗೂ ಮುನ್ನ ನಡೆಯುತ್ತಿರುವ ಕೊನೆಯ ಸೀಸನ್ ಇದಾಗಿರುವುದರಿಂದ, ತಂಡವನ್ನು ಮತ್ತೆ ಗೆಲುವಿನ ಹಳಿಗೆ ತರಲು ಫ್ರಾಂಚೈಸಿ ಅನುಭವಿ ನಾಯಕನ ಮೊರೆ ಹೋಗಿದೆ. ತಂಡದಲ್ಲಿ ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರಂತಹ ನಾಯಕತ್ವದ ಆಯ್ಕೆಗಳಿದ್ದರೂ, ಆಡಳಿತ ಮಂಡಳಿ ಮತ್ತೆ ‘ಹಿಟ್‌ಮ್ಯಾನ್’ ಮೇಲೆ ಭರವಸೆ ಇಟ್ಟಿದೆ.
2013ರಿಂದ 2023ರವರೆಗೆ ದಶಕದ ಕಾಲ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ, 2013, 2015, 2017, 2019 ಮತ್ತು 2020ರಲ್ಲಿ ತಂಡಕ್ಕೆ ದಾಖಲೆಯ 5 ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದರು. ಇದೀಗ ಮೂರು ವರ್ಷಗಳ ವಿರಾಮದ ಬಳಿಕ ಮತ್ತೆ ನಾಯಕನ ಜವಾಬ್ದಾರಿ ವಹಿಸಿಕೊಂಡಿರುವುದು ‘ಮುಂಬೈ ಪಲ್ಟನ್’ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡುವಂತೆ ಮಾಡಿದೆ.
ಮತ್ತೆ ನಾಯಕತ್ವ ವಹಿಸಿಕೊಂಡಿರುವ ಕುರಿತು ಮುಂಬೈ ಇಂಡಿಯನ್ಸ್ ಪ್ರಕಟಣೆಯಲ್ಲಿ ಮಾತನಾಡಿರುವ ರೋಹಿತ್ ಶರ್ಮಾ, “ಮುಂಬೈ ಇಂಡಿಯನ್ಸ್ ನನ್ನ ಜೀವನದ ಒಂದು ದೊಡ್ಡ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ನನಗೆ ಯಾವಾಗಲೂ ಅತ್ಯಂತ ಹೆಮ್ಮೆಯ ವಿಷಯ. ಮುಂಬರುವ ಸೀಸನ್ ಬಗ್ಗೆ ನೀತಾ ಭಾಭಿ ಮತ್ತು ಆಕಾಶ್ ಅವರೊಂದಿಗೆ ನಡೆಸಿದ ಮಾತುಕತೆಗಳು ಬಹಳ ಉತ್ಸಾಹದಾಯಕವಾಗಿವೆ. ನಾವು ಏನನ್ನು ಸಾಧಿಸಬಹುದು ಎಂಬುದರ ಬಗ್ಗೆ ನನಗೆ ಅಪಾರ ನಂಬಿಕೆಯಿದೆ” ಎಂದು ಸಂತಸ ಹಂಚಿಕೊಂಡಿದ್ದಾರೆ.
“ನಾನು 20ನೇ ಸೀಸನ್‌ಗೆ, ಮುಂದಿರುವ ಸವಾಲುಗಳಿಗೆ ಮತ್ತು ನಮ್ಮ ‘ಪಲ್ಟನ್’ ಅಭಿಮಾನಿಗಳಿಗೆ ಸಂಭ್ರಮಿಸಲು ಸಾಕಷ್ಟು ಕ್ಷಣಗಳನ್ನು ನೀಡಲು ಸಿದ್ಧನಾಗಿದ್ದೇನೆ. ನಮ್ಮದೇ ಶೈಲಿಯ ಕ್ರಿಕೆಟ್ ಆಡುವುದು, ಒಟ್ಟಾಗಿ ಸ್ಪರ್ಧಿಸುವುದು ಮತ್ತು ಆಟವನ್ನು ಆನಂದಿಸುವುದರತ್ತ ನಮ್ಮ ಸಂಪೂರ್ಣ ಗಮನವಿರಲಿದೆ” ಎಂದು ರೋಹಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.









