ಸಮೃದ್ಧಿ ಮಂಜುನಾಥ್ ನಿರ್ಮಾಣದ, ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಹಾಗೂ ಶ್ರೀನಿವಾಸರಾಜು ನಿರ್ದೇಶನದ ‘ಬೃಂದಾವಿಹಾರಿ’ ಚಿತ್ರದ ಐದನೇ ಹಾಡು ‘ಒಂದೇ ಒಂದು’ ಬೆಂಗಳೂರಿನ ಅರಮನೆ ಆವರಣದಲ್ಲಿ ಬಿಡುಗಡೆಯಾಯಿತು. ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರ ಪತ್ನಿ ಪದ್ಮ ಮಂಜುನಾಥ್ ಹಾಡನ್ನು ಅನಾವರಣಗೊಳಿಸಿದರು.
ಕವಿರತ್ನ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡನ್ನು ಗಾಯಕಿ ಕೆ.ಎಸ್. ಚಿತ್ರ ಹಾಗೂ ಜಸ್ಕರಣ್ ಸಿಂಗ್ ಹಾಡಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದು, ಗಣೇಶ್ ಹಾಗೂ ದೇವಿಕ ಭಟ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರದ ಈಗಾಗಲೇ ಬಿಡುಗಡೆಯಾಗಿರುವ ನಾಲ್ಕು ಹಾಡುಗಳು ಗಮನ ಸೆಳೆದಿದ್ದು, ಇದೀಗ ಐದನೇ ಹಾಡು ಕೂಡ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ.
ಆನಂದ್ ಆಡಿಯೋ ಮೂಲಕ ಚಿತ್ರದ ಹಾಡುಗಳು ಬಿಡುಗಡೆಯಾಗುತ್ತಿವೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಳಿಕ ಶ್ರೀನಿವಾಸರಾಜು ಹಾಗೂ ಗಣೇಶ್ ಜೋಡಿ ಮತ್ತೊಮ್ಮೆ ಒಂದಾಗಿದ್ದು, ‘ಬೃಂದಾವಿಹಾರಿ’ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದ ಬಳಿಕ ಚಿತ್ರತಂಡದ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.










