ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶಿವಮೊಗ್ಗದಲ್ಲಿ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ರೈಲ್ವೆ ಮೂಲಸೌಕರ್ಯ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದು, ರೈಲು ನಿಲ್ದಾಣಗಳ ಅಭಿವೃದ್ಧಿ ಮತ್ತು ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಡಿ.ಎಸ್. ಅರುಣ್, ರೈಲ್ವೆ ಅಧಿಕಾರಿಗಳು, ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಹಲವು ಹೊಸ ರೈಲು ಮಾರ್ಗಗಳ ಕುರಿತು ಚರ್ಚೆ
ಸಭೆಯಲ್ಲಿ ತಾಳಗುಪ್ಪ-ಸಿದ್ದಾಪುರ-ಸಿರಸಿ-ಹುಬ್ಬಳ್ಳಿ ಹೊಸ ರೈಲು ಮಾರ್ಗ, ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಮಂಗಳೂರು ರೈಲ್ವೆ ಸಮೀಕ್ಷೆ, ಭದ್ರಾವತಿ-ಚಿಕ್ಕಜಾಜೂರು ಹೊಸ ರೈಲು ಮಾರ್ಗ, ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ಹಾಗೂ ಶಿವಮೊಗ್ಗ-ಬೀರೂರು ಜೋಡಿ ರೈಲು ಮಾರ್ಗಗಳ ಕುರಿತು ಚರ್ಚಿಸಲಾಯಿತು.
ಇದರೊಂದಿಗೆ ಕೋಟೆಗಂಗೂರಿನಲ್ಲಿ ಪ್ರಸ್ತಾವಿತ ಕೋಚಿಂಗ್ ಡಿಪೋ ಸ್ಥಾಪನೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಮೊದಲ ಹಂತ ಮತ್ತು ಶಿಕಾರಿಪುರ-ರಾಣೆಬೆನ್ನೂರು ಮಾರ್ಗದ ಎರಡನೇ ಹಂತದ ಬಗ್ಗೆಯೂ ಪರಿಶೀಲನೆ ನಡೆಯಿತು.
ಅಮೃತ ಭಾರತ ನಿಲ್ದಾಣ ಯೋಜನೆಯಡಿ ರೈಲು ನಿಲ್ದಾಣಗಳ ಅಭಿವೃದ್ಧಿ, ಲೆವೆಲ್ ಕ್ರಾಸಿಂಗ್‌ಗಳು, ರಸ್ತೆ ಮೇಲ್ಸೇತುವೆಗಳು (ROB), ರಸ್ತೆ ಕೆಳಸೇತುವೆಗಳು (RUB) ಹಾಗೂ ಇತರ ರೈಲ್ವೆ ಮೂಲಸೌಕರ್ಯ ಕಾಮಗಾರಿಗಳ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.









