ಸೈಬರ್ ಕ್ರೈಂ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆಯ ಇನ್ಸ್‌ಪೆಕ್ಟರ್ ರವಿ ಕೆ.ಬಿ. ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭೋಪಾಲ್‌ನಿಂದ ಇಂದೋರ್‌ಗೆ ತೆರಳುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿತ್ತು.
ಅಪಘಾತದಲ್ಲಿ ರವಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ರವಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ಸುಮಾರು 7.30ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಿಎಸ್‌ಐ ಸೇರಿದಂತೆ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
2007ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದ ರವಿ ಕೆ.ಬಿ. ಅವರು ಈ ಹಿಂದೆ ಬೆಂಗಳೂರಿನ ಅಶೋಕನಗರ, ಇಂದಿರಾನಗರ ಹಾಗೂ ಕೋರಮಂಗಲ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಸೈಬರ್ ಪ್ರಕರಣದ ತನಿಖೆಯ ಕರ್ತವ್ಯದಲ್ಲಿದ್ದಾಗಲೇ ಸಂಭವಿಸಿದ ಈ ದುರಂತದಿಂದ ಪೊಲೀಸ್ ಇಲಾಖೆಯಲ್ಲಿ ಶೋಕ ಆವರಿಸಿದೆ.









