ಸುಪ್ರೀಂ ಕೋರ್ಟ್ (Supreme Cout) ಆವರಣದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಂಗಕ್ಕೆ ಯಾರೂ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಅತ್ಯಂತ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ನೇತೃತ್ವದಲ್ಲಿ ಇಂಡಿ (INDIA) ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ್ಗೆ ನಡೆಸಿದ ಪಾದಯಾತ್ರೆ ಹಾಗೂ ನ್ಯಾಯಾಲಯದ ಆವರಣದಲ್ಲಿ ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗದ (ECI) ಎಸ್ಐಆರ್ (SIR) ಸಂಬಂಧಿತ ತೀರ್ಮಾನಗಳು ಹಾಗೂ ಅದರ ಕಾರ್ಯವೈಖರಿಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಮತ್ತು ಇತರ ವಿಪಕ್ಷ ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಸಿಜೆಐ ಸೂರ್ಯಕಾಂತ್ ಮತ್ತು ನ್ಯಾ.ಜೋಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ನಡೆಸಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹಿರಿಯ ವಕೀಲ ಗೌರವ್ ಭಾಟಿಯಾ ಅವರು ನ್ಯಾಯಾಲಯದ ಆವರಣದಲ್ಲಿ ನಡೆದ ಪ್ರತಿಭಟನೆಯ ವಿಚಾರವನ್ನು ಪೀಠದ ಗಮನಕ್ಕೆ ತಂದರು. ಇಂತಹ ರಾಜಕೀಯ ಮೆರವಣಿಗೆಗಳು ಸುಪ್ರೀಂ ಕೋರ್ಟ್ನಲ್ಲಿ ನಡೆಯುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂದು ನಡೆದದ್ದು ನಡೆಯಬಾರದಿತ್ತು ಎಂದು ಭಾಟಿಯಾ ಪ್ರಸ್ತಾಪಿಸಿದರು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್,”ನ್ಯಾಯಾಂಗವನ್ನು ಯಾರೂ ಬೆದರಿಸಲು ಅಥವಾ ಹೆದರಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದು ನ್ಯಾಯಾಲಯದ ಮೇಲೆ ಒತ್ತಡ ಹೇರುವ ತಂತ್ರ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಸಿಜೆಐ,”ಇವೆಲ್ಲವೂ ದುರ್ಬಲ ಪ್ರಯತ್ನಗಳು, ಇವುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಹೊರಗೆ ಅವರು ಏನೇನೋ ಹೇಳಿಕೆಗಳನ್ನು ನೀಡುತ್ತಾರೆ. ನಾವೇನೂ ದಂತದ ಗೋಪುರದಲ್ಲಿ ಕುಳಿತಿಲ್ಲ, ನಮಗೆ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬ ಅರಿವಿದೆ” ಎಂದು ಹೇಳಿದರು.
ನಾವು ನೋಟಿಸ್ ನೀಡುತ್ತಿದ್ದೇವೆ, ಆದರೆ ಮುಂದಿನ ವಿಚಾರಣೆ ದಿನಾಂಕದಂದು ಅವರ ರಾಹುಲ್ ಗಾಂಧಿ ನಡವಳಿಕೆಯ ವಿವರವನ್ನು ನಾವು ತಿಳಿಯಲು ಬಯಸುತ್ತೇವೆ ಎಂದು ಸಿಜೆಐ ಎಚ್ಚರಿಸಿದರು.
ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ನಾಯಕರಿಗೆ ನೋಟಿಸ್ ಜಾರಿ ಮಾಡಿದೆ.
ಅಕ್ಟೋಬರ್ 12ರ ಸೋಮವಾರದಂದು ವಿಪಕ್ಷಗಳ ಪ್ರತಿಭಟನೆ ವೇಳೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಸೆರೆಯಾಗಿರುವ ಎಲ್ಲಾ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಡಬೇಕು ಎಂದು ನಿರ್ದೇಶನ ನೀಡಿದೆ.
ಕಳೆದ ಸೋಮವಾರ (ಅ.12) ಸೆಂಟ್ರಲ್ ದೆಹಲಿಯ ಬಾರಾಖಂಬಾ ರಸ್ತೆಯಿಂದ ಸುಪ್ರೀಂ ಕೋರ್ಟ್ವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿ ಮೈತ್ರಿಕೂಟ ಬೃಹತ್ ಪಾದಯಾತ್ರೆ ನಡೆಸಿತ್ತು. ನ್ಯಾಯಾಲಯದ ಸಂಕೀರ್ಣದೊಳಗೆ ನೂರಾರು ಕಾರ್ಯಕರ್ತರು ಹಾಗೂ ನಾಯಕರು ಜಮಾಯಿಸಿ ಧರಣಿ ನಡೆಸಿದ್ದರು.
ಇದಕ್ಕೂ ಮುನ್ನಎಸ್ಐಆರ್ ಗೊಂದಲಗಳು ಹಾಗೂ ಚುನಾವಣಾ ಆಯೋಗದ ವಿಚಾರವಾಗಿ ಚರ್ಚಿಸಲು ಅಪಾಯಿಂಟ್ಮೆಂಟ್ ಕೋರಿದ್ದ ರಾಹುಲ್ ಗಾಂಧಿ ಮನವಿಯನ್ನು ಸಿಜೆಐ ಸೂರ್ಯಕಾಂತ್ ತಿರಸ್ಕರಿಸಿದ್ದರು. ಪ್ರಕರಣ ಈಗಾಗಲೇ ನ್ಯಾಯಾಲಯದ ಮುಂದಿರುವುದರಿಂದ ಆಡಳಿತಾತ್ಮಕವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಪರಿಹಾರ ಕಂಡುಕೊಳ್ಳುವಂತೆ ಸಿಜೆಐ ಸೂಚಿಸಿದ್ದರು









