ನೇಪಾಳದಲ್ಲಿ ಭೀಕರ ಪ್ರವಾಹದ ನಡುವೆ ಮಾನವೀಯತೆಯನ್ನೇ ಪ್ರಶ್ನಿಸುವ ಘಟನೆ ನಡೆದಿದೆ. ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಮೃತದೇಹದಿಂದ ಚಿನ್ನದ ಕಿವಿಯೋಲೆಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.
ನಾರಾಯಣಿ ನದಿಯಲ್ಲಿ ಕೊಚ್ಚಿಹೋಗಿದ್ದ ಮಹಿಳೆಯ ಮೃತದೇಹವನ್ನು ದಡಕ್ಕೆ ಎಳೆದು ತರುತ್ತಿದ್ದ ವೇಳೆ ಆರೋಪಿಗಳು ಆಕೆಯ ಕಿವಿಯೋಲೆಗಳನ್ನು ತೆಗೆದುಕೊಂಡಿದ್ದಾರೆ. 41 ಸೆಕೆಂಡ್‌ಗಳ ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ವೈರಲ್ ವಿಡಿಯೋದಲ್ಲಿ ಇಬ್ಬರು ಯುವಕರು ಮರದ ಹಲಗೆಗಳ ಸಹಾಯದಿಂದ ಮೃತದೇಹವನ್ನು ದಡಕ್ಕೆ ಎಳೆದು ತಂದು, ತಲೆಯ ಕೂದಲನ್ನು ಹಿಡಿದು ಎಳೆದಾಡುತ್ತಿರುವುದು ಕಾಣಿಸಿದೆ. ಬಳಿಕ ಮಹಿಳೆಯ ಎರಡೂ ಕಿವಿಗಳಲ್ಲಿದ್ದ ಓಲೆಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯವೂ ಸೆರೆಯಾಗಿದೆ.









