ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳಲ್ಲೇ ಮಾಜಿ ಕ್ರಿಕೆಟ್ ನಾಯಕ ಹಾಗೂ ಅವಾಮಿ ಲೀಗ್ನ ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರ ಪೂರ್ವಜರ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿರುವ ಘಟನೆ ಆತಂಕ ಮೂಡಿಸಿದೆ.
ಮಾಗುರಾ ಪಟ್ಟಣದ ಕೇಶಬ್ಮೋರ್ ಪ್ರದೇಶದಲ್ಲಿರುವ ಶಕೀಬ್ ಅಲ್ ಹಸನ್ ಅವರ ಪೂರ್ವಜರ ನಿವಾಸದ ಮೇಲೆ ಸ್ಥಳೀಯ ಸಮಯ ರಾತ್ರಿ ಸುಮಾರು 8:45ಕ್ಕೆ ದಾಳಿ ನಡೆದಿದ್ದು, ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಮನೆಯ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಈ ದಾಳಿಗೆ ಕೆಲವೇ ಗಂಟೆಗಳ ಮೊದಲು ಶಕೀಬ್ ಅಲ್ ಹಸನ್ ಅವರು ಭಾರತದಿಂದ ನಡೆದ ಶೇಖ್ ಹಸೀನಾ ಅವರ ಪತ್ರಿಕಾಗೋಷ್ಠಿಯಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ದಾಳಿಯ ಹಿಂದಿನ ಕಾರಣ ಹಾಗೂ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.










