ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಯುವಕರು ಕೈಮಗ್ಗ ಉಡುಪುಗಳನ್ನು ಧರಿಸಿ ‘Get Ready With Me (GRWM)’ ಶೈಲಿಯ ವಿಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಮೂಲಕ ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವುದರ ಜೊತೆಗೆ ನೇಕಾರರ ಕುಟುಂಬಗಳಿಗೆ ಬೆಂಬಲ ನೀಡಬಹುದು ಎಂದು ಅವರು ಹೇಳಿದ್ದಾರೆ.
ಆಗಸ್ಟ್ 7ರಂದು ಆಚರಿಸಲಾಗುವ ರಾಷ್ಟ್ರೀಯ ಕೈಮಗ್ಗ ದಿನದ ಪ್ರಯುಕ್ತ ತಮ್ಮ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, 1905ರ ಆಗಸ್ಟ್ 7ರಂದು ಆರಂಭವಾದ ಸ್ವದೇಶಿ ಚಳವಳಿಯ ಐತಿಹಾಸಿಕ ಮಹತ್ವವನ್ನು ಸ್ಮರಿಸಿದರು. ಬ್ರಿಟಿಷರ ಆಳ್ವಿಕೆಗೆ ವಿರುದ್ಧವಾಗಿ ದೇಶದ ಜನರು ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ಆತ್ಮನಿರ್ಭರತೆಯ ಸಂದೇಶ ಸಾರಿದ ದಿನವೇ ಆಗಸ್ಟ್ 7 ಎಂದು ಅವರು ನೆನಪಿಸಿದರು.
ಯುವಕರು ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಅವುಗಳ ವೈಶಿಷ್ಟ್ಯವನ್ನು ಜಗತ್ತಿಗೆ ತಲುಪಿಸಬೇಕು ಎಂದು ಪ್ರಧಾನಿ ಕರೆ ನೀಡಿದರು. ಇಂತಹ ಸಣ್ಣ ಪ್ರಯತ್ನಗಳು ದೇಶದ ಕೈಮಗ್ಗ ಕ್ಷೇತ್ರಕ್ಕೆ ಉತ್ತೇಜನ ನೀಡುವುದರ ಜೊತೆಗೆ ಲಕ್ಷಾಂತರ ನೇಕಾರರ ಜೀವನೋಪಾಯಕ್ಕೂ ಬಲ ತುಂಬಲಿವೆ ಎಂದು ಅವರು ಹೇಳಿದರು.










