ನನಗೆ ಜಾತಿಯ ಮೇಲೆ ನಂಬಿಕೆ ಇಲ್ಲ. ಮನುಷ್ಯತ್ವ ನನಗೆ ಬಹಳ ಮುಖ್ಯ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಗಳು, ಬಸವಣ್ಣನವರ ಆಶಯಗಳ ಮೇಲೆ ನಾನು ರಾಜಕಾರಣವನ್ನು ಮಾಡುತ್ತಿದ್ದೇನೆ. ನನ್ನ ಈ 40 ವರ್ಷಗಳ ರಾಜಕಾರಣದಲ್ಲಿ ಯಾರನ್ನೂ ನೀನು ಯಾವ ಜಾತಿ ಎಂದು ಕೇಳಿಲ್ಲ. ಮಾನವೀಯತೆಯೇ ಬಹುದೊಡ್ಡ ಧರ್ಮ ಎಂದು ನಂಬಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಕನಕಪುರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪರಿಶಿಷ್ಟ ಜಾತಿ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಕೃತಜ್ಞತಾ ಅಭಿನಂದನಾ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ನನಗೆ ಸಿಕ್ಕ ಈ ಅಧಿಕಾರ ನನ್ನದಲ್ಲ, ನಿಮ್ಮದು. ನನ್ನನ್ನು 10 ಬಾರಿ ಸಾತನೂರು, ಕನಕಪುರ ಮಹಾಜನತೆ ಆರಿಸಿ ಆಶೀರ್ವದಿಸಿ ಕಳುಹಿಸಿದ್ದೀರಿ. ಇಂದಿನ ಈ ಅಭಿಮಾನದ ಸನ್ಮಾನದ ಶ್ರೇಯ ನಿಮಗೇ ಸಲ್ಲಬೇಕು. ಸೇವೆ ಮಾಡುವ ಭಾಗ್ಯ ಕೊಟ್ಟಿದ್ದೀರಿ. ನೀವು ಇಟ್ಟಿರುವ ನಂಬಿಕೆ ಉಳಿಸಿಕೊಂಡು, ಕ್ಷೇತ್ರದ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದು ವಾಗ್ದಾನ ನೀಡಿದರು.
ನಾನು ನಿಮ್ಮ ಮನೆ ಮಗ, ನುಡಿದಂತೆ ನಡೆಯುತ್ತೇನೆ:
ನಾನು ಈ ತನಕ ನಿಮಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಮುಂದೆಯೂ ಹೀಗೆ ನಡೆದುಕೊಳ್ಳುತ್ತೇನೆ. ಕನಕಪುರ ಕ್ಷೇತ್ರದ ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯದ ವಿಚಾರವಾಗಿ ವಿಶೇಷ ಕಾಳಜಿ ಹೊಂದಿದ್ದೇನೆ. ಕನಕಪುರ ಅಂದಾಕ್ಷಣ ಇಡೀ ದೇಶವೇ ತಿರುಗಿ ನೋಡುವಂತೆ ಮಾಡುವುದು ನನ್ನ ಗುರಿ ಮತ್ತು ಜವಾಬ್ದಾರಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ರಾಮನಗರ ಜಿಲ್ಲಾ ಪಂಚಾಯಿತಿ ಚುನಾವಣೆಗೆ ವೈರಮುಡಿ ಅವರನ್ನು ಆಯ್ಕೆ ಮಾಡಿದೆ. ನನ್ನ ತೀರ್ಮಾನವನ್ನು ನೋಡಿ ಎಲ್ಲರೂ ನಕ್ಕರು. ತಪ್ಪಿಸಲು ಏನೇನೋ ಮಾಡಿದರು ನಾನು ಜಗ್ಗಲಿಲ್ಲ. ನನಗೆ ಜಾತಿ ಮುಖ್ಯವಲ್ಲ. ವ್ಯಕ್ತಿ, ನಂಬಿಕೆ ಮುಖ್ಯ ಎಂದು ಸ್ಮರಿಸಿದರು.
ಮಳವಳ್ಳಿಯಿಂದ ಕುಣಿಗಲ್ ಗಡಿ, ದೇವನಹಳ್ಳಿ ತನಕ ನಾವೆಲ್ಲ ಬೆಂಗಳೂರು ಜಿಲ್ಲೆಯವರು. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಟ್ಟ ಮೇಲೆ ಆಸ್ತಿಗಳ ಮೌಲ್ಯಹೆಚ್ಚಾಗಿದೆ ಅಂತ ನಿಮಗೆಲ್ಲಾ ತಿಳಿದಿದೆ. ಡಿಕೆ ಶಿವಕುಮಾರ್ ರಿಯಲ್ ಎಸ್ಟೇಟ್ ಮಾಡಲು ಹೆಸರು ಬದಲಿಸಿದ್ದಾನೆ ಅಂತ ನಾಯಕರೊಬ್ಬರು ಆರೋಪಿಸಿದರು. ನಾನು ಯಾವತ್ತಾದರು ನಿಮ್ಮ ಬಳಿ ಬಂದು ಭೂ ವ್ಯವಹಾರ ಮಾಡಿದ್ದೀನಾ ಎಂದು ಪ್ರಶ್ನಿಸಿದರು.
ನಾನು ನಿಮ್ಮ ಮಗನಂತೆ, ನಿಮಗೆ ಗೌರವ ತರುವ ಕೆಲಸ ಮಾಡುತ್ತೇನೆ. ನಾನು ಮುಖ್ಯಮಂತ್ರಿ ಆಗಿರಬಹುದು. ಆದರೆ, ಇಲ್ಲಿ ಮುಖ್ಯಮಂತ್ರಿ ಎಂದು ನಿಮ್ಮ ಬಳಿ ತೋರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಒಂದು ಬಾರಿಯಂತೂ ಚಂದ್ರಶೇಖರ್ ಮೂರ್ತಿ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಬಂತು. ಆಗ ನನಗೆ ಟಿಕೆಟ್ ತಪ್ಪಿಸಿದರು. ಆಗ ನೀವೆಲ್ಲ ನನ್ನ ಬೆಂಬಲಕ್ಕೆ ನಿಂತು, ಸೈಕಲ್ ಗುರುತಲ್ಲಿ, ಇಂದಿರಾಗಾAಧಿ, ರಾಜೀವ್ ಗಾಂಧಿ ಫೋಟೋ ಇಟ್ಟು ಚುನಾವಣೆ ಪ್ರಚಾರ ಮಾಡಿದೆ. ಅವತ್ತು ಪರಿಶಿಷ್ಟ ಜಾತಿ, ಧರ್ಮ, ಹಿಂದುಳಿದ ವರ್ಗ ಎಲ್ಲರೂ ಕೂಡ ಮತ ಹಾಕಿ ನನಗೆ ಬೆಂಬಲಿಸಿದರು. ಕೇವಲ 3 ಸಾವಿರ ಮತ ಪಡೆದೆ. ಆದರೆ, ಎರಡನೇ ಬಾರಿ ನನ್ನನ್ನು ತುಂಬು ಹೃದಯದಿಂದ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟವರು ನೀವು. ಇದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಆದರೆ, ಈ ಬಾರಿ ನಿಮ್ಮನ್ನು ಮತ ಕೇಳಲು ಬರಲೇ ಇಲ್ಲ. ಸಿದ್ದರಾಮಯ್ಯನವರು ಮತ್ತು ನಾನು ರಾಜ್ಯದ ಪ್ರವಾಸ ಮಾಡಿದೆವು. 136 ಸೀಟ್ ಬಂತು. ಈ ಕ್ಷೇತ್ರದ, ರಾಜ್ಯದ ಮಹಾಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. 5 ಗ್ಯಾರಂಟಿಗಳನ್ನು ಕೊಟ್ಟಿದ್ದೇನೆ. ಕ್ಷೇತ್ರದ ಮನೆ ಯಜಮಾನಿ ಖಾತೆಗೆ 2 ಸಾವಿರ, ಬಸ್‌ನಲ್ಲಿ ಉಚಿತ ಪ್ರಯಾಣ ಅವಕಾಶ ನೀಡಿದ್ದೇವೆ. ಗ್ಯಾರಂಟಿಗಳಿಗಾಗಿ 52 ಸಾವಿರ ಕೋಟಿ ರೂ. ವಿನಿಯೋಗಿಸುತ್ತಿದ್ದೇವೆ ಎಂದು ನುಡಿದರು.
ಪಿಂಚಣಿ ಲಂಚ ತಪ್ಪಿಸಿದ್ದೇನೆ:
ಹಿಂದೆ ಕುಮಾರಸ್ವಾಮಿ ಅವರು ಮುಖ್ಯಂತ್ರಿಗಳಾದಾಗ ಪಿಂಚಿಣಿ ಕೊಡಲು ಅರ್ಜಿ ಹಾಕಿದರೆ 2 ಸಾವಿರ ಲಂಚ ಕೊಡಬೇಕಿತ್ತು. ಅದನ್ನು ತಪ್ಪಿಸಲೆಂದೇ ನಾನು ಸಮಿತಿ ಮಾಡಿ, ಅರ್ಜಿ ಪಡೆದು ಮನೆ ಬಾಗಿಲಿಗೆ ವೃದ್ಧಾಪ್ಯ, ಎಲ್ಲ ರೀತಿಯ ಪಿಂಚಣಿ ತಲುಪಿಸುತ್ತಿದ್ದೇವೆ. ಬಡವರಿಗಾಗಿ 15 ಸಾವಿರ ಸೈಟುಗಳನ್ನು ನೀಡಲು ಸಿದ್ಧತೆಯಾಗಿದೆ. ಕನಕಪುರದಲ್ಲಿ 80 ಸೈಟು ಹಂಚಿದ್ದೇವೆ. ಬಡವರಿಗೆ 20-30 ಅಳತೆ ಸೈಟಿನ ಬದಲಾಗಿ 30-40 ಸೈಟು ವಿತರಿಸುವಂತೆ ಮಾರ್ಗದರ್ಶನ ನೀಡಿದ್ದೇನೆ. ಎಲ್ಲಾ ಬಡವರು ಕಾರು ತೆಗೆದುಕೊಳ್ಳಬೇಕು, ಹಸು ಕಟ್ಟಬೇಕು ಅನ್ನೋದು ನನ್ನ ಆಸೆ. ಇದಕ್ಕಾಗಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇನೆ ಎಂದರು.
ಮೇಕೆದಾಟು ಪೂರ್ಣ ಶತಸಿದ್ಧ:
ನಮ್ಮ ಕ್ಷೇತ್ರದ ಜನ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು. ಯಾರೂ ಕೂಡ ವಲಸೆ ಹೋಗಬಾರದು. ಹೀಗಾಗಿ, ನಾನು ಚನ್ನಪಟ್ಟಣ-ರಾಮನಗರದ ಮಧ್ಯೆ ಬೃಹತ್ ಡೈರಿ ಮಾಡಿದ್ದೇವೆ. ಹಾಲಿನ ಬೆಲೆ 7 ರೂ. ಹೆಚ್ಚಳ ಮಾಡಿ, ರೈತರ ಬದುಕು ಹಸನಾಗಲಿ ಎಂದು ಅವರಿಗೆ ನೀಡುತ್ತಿದ್ದೇವೆ. ಕೆರೆಗಳಿಗೆ ನೀರನ್ನು ತುಂಬುವ ಯೋಜನೆ ರೂಪಿಸಿದ್ದೇವೆ. ಇನ್ನು ಎರಡು ತಿಂಗಳಲ್ಲಿ ಪ್ರತಿ ಹಳ್ಳಿಗೂ ಕಾವೇರಿ ನೀರನ್ನು ಹರಿಸುವ ಸಿದ್ಧತೆ ಮಾಡಿಕೊಂಡಿದ್ದೇವೆ. ಬೆಂಗಳೂರು ದಕ್ಷಿಣ ಅಂತ ಹೆಸರಿಟ್ಟಿದ್ದೀರಿ. ಮೇಕೆದಾಟು ಯೋಜನೆ ಪೂರ್ಣಗೊಳಿಸಿ ಎಂದು ಕ್ಷೇತ್ರದ ಜನ ಆದೇಶ ಮಾಡಿದ್ದಾರೆ. ಅದಕ್ಕೆ ತಲೆಬಾಗಿ ಯೋಜನೆ ರೂಪಿಸಿದ್ದೇವೆ. ಸುಪ್ರಿಂಕೋರ್ಟ್ನಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಇದು ನನ್ನ ಅವಧಿಯಲ್ಲೇ ಪೂರ್ಣಗೊಳ್ಳಬೇಕು. ಆ ಕೆಲಸವನ್ನು ಮಾಡುತ್ತೇನೆ ಎಂದು ವಾಗ್ದಾನ ನೀಡಿದರು.
ಬೆಂಗಳೂರು ದಕ್ಷಿಣದಲ್ಲಿ 4 ಮೆಡಿಕಲ್ ಕಾಲೇಜು:
ಬೆಂಗಳೂರ ದಕ್ಷಿಣದಲ್ಲಿ 4 ಮೆಡಿಕಲ್ ಕಾಲೇಜುಗಳಿವೆ. ಚನ್ನಪಟ್ಟಣ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು, ರಾಮನಗರದಲ್ಲಿ ಯೂನಿರ್ವಸಿಟಿ, ಹಾರೋಹಳ್ಳಿ, ಕನಕಪುರ ಮಧ್ಯೆ ದಯಾನಂದ ಸಾಗರ ಕಾಲೇಜು. ಇಡೀ ಭಾರತದ ದೇಶದಲ್ಲಿ ನಾಲ್ಕು ಕಾಲೇಜು ಎಲ್ಲೂ ಇಲ್ಲ. ನಿಮ್ಮ ಕ್ಷೇತ್ರದಲ್ಲಿ ಮಾತ್ರ. ನಮ್ಮ ಕ್ಷೇತ್ರದ ಜನರ ಬದುಕಿನಲ್ಲಿ ಬದಲಾವಣೆ ಆಗಬೇಕು. ಸಾತನೂರು ಕೆಂಬಾಳ ಹತ್ತಿರ, ಕಲ್ಲಹಳ್ಳಿ, ಮರಿಯ್ಯನ ದೊಡ್ಡಿ ಮುಂತಾದ 10 ಕಡೆ ಶಾಲೆಗಳು ನಿರ್ಮಾಣ ಆಗುತ್ತಿವೆ. ನಮ್ಮ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಸಿಗಬೇಕು. ನಾನು ಪಡೆದ ವಿದ್ಯಾಭ್ಯಾಸಕ್ಕಿಂತ ನೀವು ಚೆನ್ನಾಗಿ ಪಡೆದುಕೊಳ್ಳಬೇಕು. ಸ್ವಾಭಿಮಾನ, ಸ್ವಾವಲಂಬನೆಯಿಂದ ಬದುಕಬೇಕು ಎನ್ನುವುದು ನನ್ನ ಆಸೆ ಎಂದರು.
ನನ್ನ ಭೇಟಿ ಸುಲಭ:
ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಲು ಆಗುತ್ತಿಲ್ಲ ಎನ್ನುವ ಅರಿವು ನನಗಿದೆ. ಈಗ ಹೊಸ ಮನೆ ಗಂಗಾಗೆ ಹೋಗಿದ್ದೇನೆ. ಅಧಿವೇಶನ ಮುಗಿದ ನಂತರ ನಿಮ್ಮ ಭೇಟಿಗೆ ಹೆಚ್ಚು ಸಮಯ ನೀಡುವ ಬಗ್ಗೆ ಚಿಂತನೆ ಮಾಡಿದ್ದೇನೆ. ಟೀಕೆ ಮಾಡೋರು ಮಾಡಲಿ. ಚಿಂತೆ ಇಲ್ಲ. ನಾನು ಏನು ಅನ್ನೋದು ನಿಮಗೆ ತಿಳಿದಿದೆ ಎಂದು ಹೇಳಿದರು.
ನಾನು ಏನು ಮಾತುಕೊಟ್ಟಿದ್ದೀನಿ. ಅದರಂತೆ ನಡೆದುಕೊಂಡಿದ್ದೇನೆ. ನೇಗಿಲಯೋಗಿ ಕಾರ್ಯಕ್ರಮದ ಅಡಿ ರೈತರಿಗೆ ಉಚಿತವಾಗಿ ಹೊಲ ಉಳಿಸುವ, ತೇಗದಸಿರಿ ಯೋಜನೆ ಅಡಿ ರಸ್ತೆ ಅಂಚಲ್ಲಿ ತೇಗ ಹಾಕಿ ಶೇ.70ರಷ್ಟು ರೈತರಿಗೆ 30ರಷ್ಟು ಸರ್ಕಾರಕ್ಕೆ ನೀಡಲು ಮುಂದಾಗಿದ್ದೇವೆ. ಅಧಿಕಾರಿಗಳು ಹಳ್ಳಿಗೆ ಬಂದು ಜನರನ್ನು ಸಮಸ್ಯೆ ಏನಿದೆ ಅಂತ ಕೇಳುವ ಪ್ರಜಾಸೇವೆ ಯೋಜನೆ ಜಾರಿಮಾಡಿದ್ದೇನೆ. ಬಸವಣ್ಣನವರ ತತ್ವ ಅಂಬೇಡ್ಕರ್ ಅವರು, ಚಿಂತನೆ, ಸಮಾನತೆಯಲ್ಲಿ ನಾನು ನಡೆಯುತ್ತಿದ್ದೇನೆ ಎಂದರು.
ಈ ದೇಶದ ಸಂವಿಧಾನ, ಜಾತಿ ಧರ್ಮ, ಸಮಾನತೆ ಎಲ್ಲವನ್ನೂ ಕೊಟ್ಟಿದೆ. ನನಗೆ ಸಂವಿಧಾನ ಮುಖ್ಯ. ಮುಸಲ್ಮಾನರು, ಕ್ರೈಸ್ತರು, ಅಲ್ಪಸಂಖ್ಯಾತರು, ಪರಿಶಿಷ್ಠ ಜಾತಿ, ಜನಾಂಗ, ಹಿಂದುಳಿದವರು ಎಲ್ಲೂ ಒಂದೇ. ಸೂರ್ಯ, ಚಂದ್ರ ಭೂಮಿಗೆ ಜಾತಿ ಇದೆಯಾ. ಸೂರ್ಯ ಬೆಳಕು ಕೊಡುವಾಗ ಜಾತಿ ಕೇಳಿ ಕೊಡುತ್ತಾನಾ, ಇಲ್ಲ ತಾನೇ. ಹಾಗೆಯೇ ಸರ್ವಧರ್ಮವೂ ನನಗೆ ಮುಖ್ಯ ಎಂದು ತಿಳಿಸಿದರು









