ರಾಜ್ಯದಲ್ಲಿ ಬಸವ ಮಂಟಪ ಕೃತಿ ಬ್ಯಾನ್ ಮಾಡಲು ಸಚಿವ ಸಂಪುಟ ನಿರ್ಧರಿಸಿದ್ದು, ಲೇಖಕ ರವಿ ಹಂಜ್, ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಪರಮೇಶ್ವರ್ (DCM Parameshwar) ಅವರು ತಿಳಿಸಿದ್ದಾರೆ.
ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರವಿ ಹಂಜ್ ಎಂಬ ಒಬ್ಬ ವ್ಯಕ್ತಿ ಬಸವ ಮಂಟಪ ಪುಸ್ತಕ ಪಬ್ಲಿಷ್ ಮಾಡಿದ್ದಾರೆ. ಇದರಲ್ಲಿ ಅವರು ಬಸವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಬಸವಣ್ಣರನ್ನ ಲೂಟಿಕೋರ ಅಂದಿದ್ದಾರೆ. ಇದರ ಬಗ್ಗೆ ಬಸವ ಸಮಿತಿಯವ್ರು ಒಂದು ಮನವಿ ಕೊಟ್ಟರು. ಅದರ ಆಧಾರದಲ್ಲಿ ಬಸವ ಮಂಟಪ ಪುಸ್ತಕ ಬಗ್ಗೆ ಸುದೀರ್ಘ ಚರ್ಚೆ ಆಗಿದೆ. ಸದರಿ ಕೃತಿಯನ್ನು ಮುಟ್ಟುಗೋಲು ಹಾಕಲು, ರವಿ ಹಂಜ್ ಮತ್ತು ಪ್ರಕಾಶಕರ ವಿರುದ್ಧ ಕಾನೂನು ಕ್ರಮಕ್ಕೆ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಆಗಿದೆ. ಇದು ಗಂಭೀರ ವಿಚಾರ. ಸಾಮರಸ್ಯ ಕದಡುವ ಸಾಧ್ಯತೆ ಇತ್ತು. ರಾಜ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಕಾರಣ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಈ ಸಂಬಂಧ ಬೆಂಗಳೂರು ಹಾಗೂ ಬೀದರ್‌ನಲ್ಲಿ ಲೇಖಕ ರವಿ ಹಂಜ್ ವಿರುದ್ಧ ದೂರು ದಾಖಲಾಗಿದ್ದು, ಪುಸ್ತಕದ ಪ್ರತಿ ಹರಿದು ಹಾಕಿ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಎಂ.ಬಿ. ಪಾಟೀಲ್, ಪುಸ್ತಕದಲ್ಲಿ ಬಸವಣ್ಣರನ್ನು ಕ್ರಿಮಿನಲ್ ರೀತಿ ಬಿಂಬಿಸಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕನಿಗೆ ಅಪಮಾನವಾಗಿದ್ದು, ಲೇಖಕರ ವಿರುದ್ಧ ಎಫ್‌ಐಆರ್ ದಾಖಲಾಗಬೇಕು ಅಂದರು.
ಸಚಿವ ಈಶ್ವರ ಖಂಡ್ರೆ, ಶಾಸಕ ಬಿ.ಆರ್. ಪಾಟೀಲ್, ಬಸವಧರ್ಮ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮಿ ಸೇರಿ ಲಿಂಗಾಯತ ನಾಯಕರು ವಿವಾದಾತ್ಮಕ ಪುಸ್ತಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಎಕ್ಸ್ನಲ್ಲಿ ಕಿಡಿಕಾರಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ತಮ್ಮ ಕೃತಿಯನ್ನು ಲೇಖಕ ರವಿ ಹಂಜ್ ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಗೆ ಬದ್ಧ. ಕಾನೂನು ಕ್ರಮವಾದರೂ, ಗಲ್ಲಿಗೇರಿಸಿದರೂ ಸಿದ್ಧ ಇದ್ದೇನೆ ಅಂದಿದ್ದಾರೆ.









