ಕೋಟೆನಾಡು ಚಿತ್ರದುರ್ಗದಲ್ಲಿ ನಡೆದ ಮದಕರಿನಾಯಕ ಜಯಂತೋತ್ಸವದಲ್ಲಿ ನಟ ಕಿಚ್ಚ ಸುದೀಪ್ ಭಾಗಿಯಾಗಿ ಅಭಿಮಾನಿಗಳ ಗಮನ ಸೆಳೆದರು. ಸುದೀಪ್ ಆಗಮಿಸುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಜಯಂತೋತ್ಸವದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸುದೀಪ್, ಚಿತ್ರದುರ್ಗದೊಂದಿಗಿನ ತಮ್ಮ ಒಡನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದರು. “ನೀವೆಲ್ಲ ಹೇಗಿದ್ದೀರಿ?” ಎಂದು ಮಾತು ಆರಂಭಿಸಿದ ಅವರು, ವರ್ಷದ ಹಿಂದೆ ಚಿತ್ರದುರ್ಗಕ್ಕೆ ಬಂದಿದ್ದನ್ನು ನೆನಪಿಸಿಕೊಂಡರು. ಚಿತ್ರದುರ್ಗಕ್ಕೆ ಕರೆದಾಗ ತಾವು ಯಾವತ್ತೂ ತಪ್ಪಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.
ಇನ್ನು ಮುಂದೆ ಆಗಾಗ ನಿಮ್ಮನ್ನು ನೋಡಲು ಬರುತ್ತೇನೆ. ನೀವೆಲ್ಲರೂ ಚೆನ್ನಾಗಿರಬೇಕು ಎಂದು ಆಶಿಸುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳ ಮೇಲಿನ ಪ್ರೀತಿ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಅಭಿಮಾನಿಗಳ ನೂಕುನುಗ್ಗಲು ಹೆಚ್ಚಾದರೂ ಸುದೀಪ್ ಕೂಲಾಗಿ ಜನರತ್ತ ಕೈಬೀಸಿ ನಿರ್ಗಮಿಸಿದರು.
ಕೋಟೆನಾಡಿಗೆ ಬರಿಗಾಲಲ್ಲಿ ಬಂದ ಕಿಚ್ಚ
ನವರಾತ್ರಿ ಹಿನ್ನೆಲೆಯಲ್ಲಿ ಪೂಜಾ ಕೈಂಕರ್ಯ ಕೈಗೊಂಡಿದ್ದ ನಟ ಸುದೀಪ್ ಅಂದು ಉಪವಾಸದಲ್ಲಿದ್ದರು. ಹೀಗಾಗಿ ಚಿತ್ರದುರ್ಗದ ಎಸ್‌ಜೆಎಂ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಅವರು, ಬರಿಗಾಲಲ್ಲೇ ಕೆಳಗಿಳಿದರು.
ಜಯಂತೋತ್ಸವದಲ್ಲಿ ಭಾಗಿಯಾಗುವ ಮುನ್ನ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ತೆರಳಿ ಮಾದಾರ ಚನ್ನಯ್ಯ ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಬಳಿಕ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಮದಕರಿನಾಯಕ ಜಯಂತೋತ್ಸವದಲ್ಲಿ ಭಾಗಿಯಾದರು.
ಬ್ಯಾರಿಕೇಡ್ ಹಾರಿ ವೇದಿಕೆ ಏರಿದ ಅಭಿಮಾನಿಗಳು
ಸುದೀಪ್ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ವೇಳೆ ಕೆಲ ಅಭಿಮಾನಿಗಳು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಹತ್ತಿ ವೇದಿಕೆಯತ್ತ ನುಗ್ಗಿದರು. ಅಭಿಮಾನಿಗಳನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು. ಆಯೋಜಕರು ವೇದಿಕೆ ಏರದಂತೆ ಮನವಿ ಮಾಡಿದರೂ, ಅಭಿಮಾನಿಗಳು ‘ಕಿಚ್ಚ, ಕಿಚ್ಚ’ ಎಂದು ಘೋಷಣೆ ಕೂಗುತ್ತಾ ವೇದಿಕೆ ಏರಿ ಗಣ್ಯರನ್ನು ಸುತ್ತುವರಿದರು.
ವೇದಿಕೆಯಲ್ಲಿ ಜನಸ್ತೋಮ ಹೆಚ್ಚಾದ ಕಾರಣ ಆಸೀನರಾಗಿದ್ದ ವಿವಿಧ ಮಠಗಳ ಮಠಾಧೀಶರು ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ರಘುಮೂರ್ತಿ ಕೊಂಚ ಗಲಿಬಿಲಿಗೊಂಡರು. ಮಾಜಿ ಸಚಿವ ರಾಜೂಗೌಡ ಅವರು ಅಭಿಮಾನಿಗಳನ್ನು ಸಮಾಧಾನಪಡಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಕೊನೆಗೆ ಸುದೀಪ್ ವೇದಿಕೆಯನ್ನುದ್ದೇಶಿಸಿ ಮಾತನಾಡಿ ಅಲ್ಲಿಂದ ನಿರ್ಗಮಿಸಿದರು. ಅವರ ಹಿಂದೆಯೇ ಸಾವಿರಾರು ಅಭಿಮಾನಿಗಳು ಹೊರಟುಹೋದರು. ಇದರಿಂದ ವೇದಿಕೆಯಲ್ಲಿ ಉಳಿದ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಒಬ್ಬೊಬ್ಬರಾಗಿ ವೇದಿಕೆಯಿಂದ ನಿರ್ಗಮಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು, ಗಣ್ಯರು ಹಾಗೂ ನಾಯಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಇ









