ಸೌದಿ ಅರೇಬಿಯಾದಲ್ಲಿ ಭಿಕ್ಷಾಟನೆ, ಅನಧಿಕೃತವಾಗಿ ಹಣ ಸಂಗ್ರಹಿಸುವುದು ಹಾಗೂ ವೀಸಾ ನಿಯಮಗಳನ್ನು ಉಲ್ಲಂಘಿಸುವುದರ ವಿರುದ್ಧ ಪಾಕಿಸ್ತಾನ ತನ್ನ ನಾಗರಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಸೌದಿಯಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿ ಉಮ್ರಾ ಯಾತ್ರಿಕರು ಹಾಗೂ ಕಾರ್ಮಿಕರನ್ನು ಉದ್ದೇಶಿಸಿ ಈ ಸಲಹೆ ನೀಡಿದ್ದು, ಸೌದಿ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ಮಕ್ಕಾ ಮತ್ತು ಮದೀನಾ ಸೇರಿದಂತೆ ಪವಿತ್ರ ಸ್ಥಳಗಳ ಸುತ್ತಮುತ್ತ ಭಿಕ್ಷಾಟನೆ ಹಾಗೂ ಅನುಮತಿಯಿಲ್ಲದೆ ಹಣ ಸಂಗ್ರಹಿಸುವುದನ್ನು ಸೌದಿ ಅಧಿಕಾರಿಗಳು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ವೀಸಾ ಅವಧಿ ಮೀರಿಸುವುದು ಅಥವಾ ವೀಸಾದಲ್ಲಿ ಅನುಮತಿಸದ ಚಟುವಟಿಕೆಗಳಲ್ಲಿ ತೊಡಗುವುದನ್ನೂ ತಪ್ಪಿಸುವಂತೆ ಪಾಕಿಸ್ತಾನಿ ಪ್ರಜೆಗಳಿಗೆ ಸೂಚಿಸಲಾಗಿದೆ.
ಸೌದಿ ಕಾನೂನುಗಳು ಅಥವಾ ವೀಸಾ ಷರತ್ತುಗಳನ್ನು ಉಲ್ಲಂಘಿಸಿದರೆ ಬಂಧನ, ವಶಕ್ಕೆ ಪಡೆಯುವುದು ಮತ್ತು ಗಡೀಪಾರು ಸೇರಿದಂತೆ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ರಾಯಭಾರ ಕಚೇರಿ ಎಚ್ಚರಿಸಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ವೀಡಿಯೊವನ್ನೂ ಹಂಚಿಕೊಂಡಿದೆ.










