ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ‘ರೋಡ್ ರೇಜ್’ ಎಂಬ ಪದ ಹೆಚ್ಚು ಕೇಳಿಬರುತ್ತಿದ್ದು, ಅದರಲ್ಲೂ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸವಾರರ ನಡುವೆ ನಡೆಯುವ ಜಗಳಗಳು ಸಾಮಾನ್ಯವಾಗಿವೆ. ಇದೇ ವಿಚಾರವನ್ನು ಕೇಂದ್ರವಾಗಿಟ್ಟುಕೊಂಡು ನಿರ್ದೇಶಕ ಸೂರ್ಯ ಅವರು ‘ರೋಡ್ ರೇಜ್’ ಹೆಸರಿನ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಉಂಟಾಗುವ ಕೋಪ, ಅಸಹನೆ ಹಾಗೂ ಸಣ್ಣಪುಟ್ಟ ವಿಚಾರಗಳಿಂದ ದೊಡ್ಡ ಮಟ್ಟದ ಸಂಘರ್ಷಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದನ್ನು ಕಥೆಯ ಮೂಲಕ ತೋರಿಸಲು ಪ್ರಯತ್ನಿಸಲಾಗಿದೆ. ಬೆಂಗಳೂರಿನ ಟ್ರಾಫಿಕ್ ಹಾಗೂ ರಸ್ತೆ ಸಂಸ್ಕೃತಿಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಕಿರುಚಿತ್ರ ಪ್ರೇಕ್ಷಕರ ಗಮನ ಸೆಳೆಯುವ ನಿರೀಕ್ಷೆಯಿದೆ.
‘ರೋಡ್ ರೇಜ್’ ಕಿರುಚಿತ್ರವನ್ನು ರಾಜಶೇಖರ್ ಸೋಮಶೇಖರ್ ಅವರು ಶ್ರೀ ಸಾಯಿ ಗಗನ್ ಡಿಸ್ಟ್ರಿಬ್ಯೂಟರ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಸಾಮಾಜಿಕವಾಗಿ ಪ್ರಸ್ತುತವಾಗಿರುವ ವಿಷಯವನ್ನು ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ಚಿತ್ರತಂಡ ಈ ಕಿರುಚಿತ್ರವನ್ನು ರೂಪಿಸಿದೆ.










