ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಬ್ಬರು ಯುವ ಉದ್ಯಮಿಗಳು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅದರಲ್ಲೂ ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಬಟ್ಟೆ ಹಾಗೂ ಟೆಕ್ಸ್‌ಟೈಲ್ಸ್ ಕಸದ ಸಮಸ್ಯೆಯನ್ನು ಗಮನಿಸಿದ ಪ್ರಸಾದ್ ಲಿಂಗವರ್ ಅವರು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಆಲೋಚನೆ ಮಾಡಿದರು.
ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಪ್ರಸಾದ್ ಲಿಂಗವರ್ ಅವರು ನಗರದ ಟೆಕ್ಸ್‌ಟೈಲ್ಸ್ ಕಸದ ಪ್ರಮಾಣವನ್ನು ಗಮನಿಸಿ, ಈ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ತಮ್ಮ ರೂಮ್‌ಮೇಟ್ ಹಾಗೂ ಕಾಲೇಜು ಸ್ನೇಹಿತ ನಚಿಕೇತ ಆಚಾರ್ಯ ಅವರೊಂದಿಗೆ ಸೇರಿ ಬಟ್ಟೆ ಕಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಮಾರ್ಗಗಳನ್ನು ಹುಡುಕಲು ಆರಂಭಿಸಿದರು.
ಇಬ್ಬರು ಸ್ನೇಹಿತರ ಈ ಪ್ರಯತ್ನದಿಂದ ‘NoKasa’ (ನೋ ಕಸ) ಎಂಬ ಬ್ರ್ಯಾಂಡ್ ಹುಟ್ಟಿಕೊಂಡಿದೆ. ಬಟ್ಟೆ ಕಸವನ್ನು ಮರುಬಳಕೆ ಹಾಗೂ ಮರುಸಂಸ್ಕರಣೆಯ ಮೂಲಕ ಪರಿಸರ ಸ್ನೇಹಿಯಾಗಿ ನಿರ್ವಹಿಸುವ ಉದ್ದೇಶದೊಂದಿಗೆ ಈ ಯೋಜನೆ ರೂಪುಗೊಂಡಿದೆ. ಬೆಂಗಳೂರಿನ ಕಸದ ಸಮಸ್ಯೆಗೆ ಯುವ ಉದ್ಯಮಿಗಳ ಈ ಹೊಸ ಪ್ರಯತ್ನ ವಿಭಿನ್ನ ಪರಿಹಾರದ ಭರವಸೆ ಮೂಡಿಸಿದೆ.










