ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ದುಬಾರಿ ಶುಲ್ಕದಿಂದ ಬೇಸತ್ತಿರುವ ಪೋಷಕರು ಇದೀಗ ನಿಧಾನವಾಗಿ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆರಂಭಿಸಿರುವ ಸರ್ಕಾರಿ ಎಲ್‌ಕೆಜಿ ಮತ್ತು ಯುಕೆಜಿ (ಪೂರ್ವ ಪ್ರಾಥಮಿಕ) ತರಗತಿಗಳಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
2026-27ನೇ ಶೈಕ್ಷಣಿಕ ವರ್ಷದಲ್ಲಿ, ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳು ಹಾಗೂ ಮೇಲ್ದರ್ಜೆಗೇರಿಸಲಾದ ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 14,000ಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಪಡೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿವೆ. ಈ ಸಾಧನೆ ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಮತ್ತೊಂದು ಮೈಲಿಗಲ್ಲಾಗಿದೆ.
ಉತ್ತಮ ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಾಗೂ ಸರ್ಕಾರಿ ಶಾಲೆಗಳ ಮೇಲಿನ ಪೋಷಕರ ವಿಶ್ವಾಸ ಹೆಚ್ಚುತ್ತಿರುವುದು ದಾಖಲಾತಿ ಏರಿಕೆಗೆ ಪ್ರಮುಖ ಕಾರಣವೆಂದು ಶಿಕ್ಷಣ ಇಲಾಖೆ ತಿಳಿಸಿದೆ. ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಿಗುತ್ತಿರುವ ಈ ಅಭೂತಪೂರ್ವ ಪ್ರತಿಕ್ರಿಯೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.










