ಇಸ್ಲಾಮಾಬಾದ್: ಆರ್ಥಿಕ ಹಾಗೂ ರಾಜಕೀಯ ಸಂಕಷ್ಟಗಳಿಂದ ತತ್ತರಿಸುತ್ತಿರುವ ಪಾಕಿಸ್ತಾನದಲ್ಲಿ ಶಹಬಾಜ್ ಶರೀಫ್ ನೇತೃತ್ವದ ಸರ್ಕಾರದ ಆಂತರಿಕ ಭಿನ್ನಾಭಿಪ್ರಾಯಗಳು ಇದೀಗ ಬಹಿರಂಗವಾಗಿವೆ. ಗೃಹ ಸಚಿವ ಮೊಹ್ಸಿನ್ ನಖ್ವಿ ಮತ್ತು ಪ್ರಧಾನಿ ಶಹಬಾಜ್ ಶರೀಫ್ ಅವರ ಆಡಳಿತ ವ್ಯವಸ್ಥೆಯ ನಡುವೆ ಭಿನ್ನಾಭಿಪ್ರಾಯಗಳು ತೀವ್ರಗೊಂಡಿರುವುದು ಸರ್ಕಾರದ ಸ್ಥಿರತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇತ್ತೀಚಿನ ದಿನಗಳಲ್ಲಿ ಮೊಹ್ಸಿನ್ ನಖ್ವಿ ಅವರು ಸಚಿವ ಸಂಪುಟದ ಕೆಲವು ಪ್ರಮುಖ ನಿರ್ಧಾರಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಅವರು, ಇದೀಗ ದೇಶದ ಇತಿಹಾಸದಲ್ಲೇ ಅತಿದೊಡ್ಡ ಹಗರಣವನ್ನು ಬಯಲಿಗೆಳೆಯುವುದಾಗಿ ಘೋಷಿಸಿದ್ದಾರೆ. ಈ ಹೇಳಿಕೆ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ನ್ಯಾಯಾಧೀಶರಿಂದ ಹಿಡಿದು ರಾಜಕಾರಣಿಗಳವರೆಗೆ ವ್ಯವಸ್ಥೆಯ ಪ್ರಮುಖ ಅಂಗಗಳೇ ಈ ಅಕ್ರಮದಲ್ಲಿ ಭಾಗಿಯಾಗಿವೆ ಎಂದು ಮೊಹ್ಸಿನ್ ನಖ್ವಿ ಆರೋಪಿಸಿದ್ದಾರೆ. ಅವರ ಈ ಹೇಳಿಕೆ ಸರ್ಕಾರದೊಳಗಿನ ಭಿನ್ನಾಭಿಪ್ರಾಯ ಮತ್ತಷ್ಟು ಗಂಭೀರವಾಗಿರುವ ಸೂಚನೆಯೇ ಎಂಬ ಚರ್ಚೆ ಇದೀಗ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಆರಂಭವಾಗಿದೆ.










