ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ (Delimitation Bill) ಇದೀಗ ದಕ್ಷಿಣ ಭಾರತದ ಬಹುಪಾಲು ಪಕ್ಷಗಳ ಬೆಂಬಲ ವ್ಯಕ್ತವಾಗುತ್ತಿರುವಂತೆ ಕಾಣುತ್ತಿದೆ. ಡಿಎಂಕೆ (DMK), ಟಿಡಿಪಿ (TDP), ವೈಎಸ್ಆರ್ಸಿಪಿ (YSRCP), ಜನಸೇನಾ (Jana Sena), ಜೆಡಿಎಸ್ (JDS) ಮತ್ತು ಬಿಆರ್ಎಸ್ (BRS) ಪಕ್ಷಗಳು ಮಸೂದೆಯ ಪರವಾಗಿ ನಿಂತಿವೆ.
ಈ ಪಕ್ಷಗಳ ಸಂಸದರು ಹಾಗೂ ಬಿಜೆಪಿಯ ಸಂಸದರು ಸೇರಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ ಮತ್ತು ಆಂಧ್ರಪ್ರದೇಶದ ಒಟ್ಟು 129 ಲೋಕಸಭಾ ಸದಸ್ಯರ ಪೈಕಿ ಸುಮಾರು 75 ಮಂದಿ ಮಸೂದೆಯ ಪರವಾಗಿ ಮತ ಚಲಾಯಿಸುವ ನಿರೀಕ್ಷೆಯಿದೆ. ಅಂದರೆ, ಇದು ಶೇ.58ರಷ್ಟು ಬೆಂಬಲಕ್ಕೆ ಸಮಾನವಾಗಿದೆ.
ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ಮತದಾನಕ್ಕೆ ಹೋಲಿಸಿದರೆ ಇದು ಮಹತ್ವದ ಬದಲಾವಣೆಯಾಗಿದೆ. ಆಗ ಪುದುಚೇರಿ ಮತ್ತು ಲಕ್ಷದ್ವೀಪವನ್ನೂ ಒಳಗೊಂಡಂತೆ ದಕ್ಷಿಣ ಭಾರತದ 131 ಸಂಸದರ ಪೈಕಿ 75 ಮಂದಿ ಹಿಂದಿನ ತಿದ್ದುಪಡಿ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದರು. 53 ಮಂದಿ ಮಸೂದೆಯ ಪರವಾಗಿ ಮತ ಹಾಕಿದ್ದರು.
ಇದಕ್ಕೂ ಒಂದು ದಿನ ಮೊದಲು ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಕೂಡ ಪ್ರತಿಪಕ್ಷಗಳ ನಿಲುವಿನಿಂದ ಹಿಂದೆ ಸರಿದಿತ್ತು. ಶರದ್ ಪವಾರ್ ಅವರನ್ನ ಭೇಟಿಯಾದ ಬಳಿಕ ಪಕ್ಷದ ನಾಯಕ ಜಿತೇಂದ್ರ ಅವ್ಹಾಡ್ ಈ ನಿರ್ಧಾರವನ್ನ ಪ್ರಕಟಿಸಿದ್ದರು. ಕ್ಷೇತ್ರ ಮರುವಿಂಗಡಣೆ ಸಂವಿಧಾನಾತ್ಮಕ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಶನಿವಾರ ಮತ್ತಷ್ಟು ಪಕ್ಷಗಳು ಮಸೂದೆಗೆ ಬೆಂಬಲ ಘೋಷಿಸಿದವು. ಬಿಆರ್ಎಸ್ನ ಕೆ.ಟಿ. ರಾಮರಾವ್ ಮಾತನಾಡಿ, ಪಕ್ಷದ ಮೂವರು ರಾಜ್ಯಸಭಾ ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಲಿದ್ದಾರೆ. ಸಂಸತ್ತಿನಲ್ಲಿ ದಕ್ಷಿಣ ಭಾರತದ ಪ್ರಸ್ತುತ ಶೇ.24ರಷ್ಟು ಪ್ರಾತಿನಿಧ್ಯವನ್ನು ಈ ಪ್ರಸ್ತಾವನೆ ರಕ್ಷಿಸುತ್ತದೆ. ಇದನ್ನೇ ಪಕ್ಷ ಮೊದಲಿನಿಂದಲೂ ಒತ್ತಾಯಿಸುತ್ತಿದೆ ಎಂದು ಅವರು ಹೇಳಿದರು.
ವೈಎಸ್ಆರ್ಸಿಪಿ ನಾಯಕರ ಪ್ರಕಾರ, ಕೇಂದ್ರ ಸರ್ಕಾರವು ಸಂಸತ್ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಏಪ್ರಿಲ್ನಲ್ಲಿಯೇ ಪಕ್ಷದ ಸಂಸದರು ಮಸೂದೆಯನ್ನು ಬೆಂಬಲಿಸಿದ್ದರು. ಇದೀಗ ಆ ಭರವಸೆಯನ್ನು ತಿದ್ದುಪಡಿ ಮಸೂದೆಯಲ್ಲಿ ಸೇರಿಸಿರುವುದರಿಂದ ಮತ್ತೊಮ್ಮೆ ಮಸೂದೆಯ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನ.30ರಿಂದ ಸಂಸತ್ತಿನ ವಿಶೇಷ ಅಧಿವೇಶನ
ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನ ಮಂಡಿಸಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗುತ್ತದೆ.
ಕಳೆದ ಆಗಸ್ಟ್ 13ರಂದು ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ನಡೆಯುತ್ತಿರುವ ಮೊದಲ ಸಂಸತ್ ವಿಶೇಷ ಅಧಿವೇಶನ ಇದಾಗಿದೆ. ಅಂದು ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿರಲಿಲ್ಲ. ಹೀಗಾಗಿ ಕಡಿಮೆ ಅವಧಿಯ ಸೂಚನೆಯಲ್ಲಿಯೇ ಸಂಸದರನ್ನ ಮತ್ತೆ ಅಧಿವೇಶನಕ್ಕೆ ಕರೆಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿದೆ.









