ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ (Darshan) ಬೆನ್ನುನೋವು ಸಂಬಂಧ ಜೈಲಿನಲ್ಲೇ ಫಿಸಿಯೋಥೆರಪಿ (Physiotherapy) ಮಾಡಲಾಗುತ್ತಿದೆ. ಅಗತ್ಯಬಿದ್ದರೆ ಮಾತ್ರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬಹುದು ಎಂದು ಕೋರ್ಟ್ ಸೂಚಿಸಿತ್ತು. ಆದರೆ ಜೈಲಿನಲ್ಲಿಯೇ ಚಿಕಿತ್ಸೆ ಮುಂದುವರಿಸಲು ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಬೆನ್ನುನೋವಿಗೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ಗೆ ಜೈಲಧಿಕಾರಿಗಳು ರಿಪೋರ್ಟ್ ಸಲ್ಲಿಸಿದ್ದು, ರಿಪೋರ್ಟ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದರ್ಶನ್ ಬೆನ್ನುನೋವು ಸಂಬಂಧ ನೀಡಿದ ಚಿಕಿತ್ಸೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ದರ್ಶನ್ಗೆ ಸೊಂಟದ ಬೆನ್ನುಮೂಳೆಯ ಡಿಸ್ಕ್ ಸಮಸ್ಯೆಯಿದ್ದು, ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದೆ ಸಿ.ವಿ. ರಾಮನ್ ಜನರಲ್ ಆಸ್ಪತ್ರೆಯ ಫಿಸಿಯೋಥೆರಪಿ ತಂಡ ಚಿಕಿತ್ಸೆ ನೀಡಿತ್ತು. ಈ ಬಾರಿ ಬೆನ್ನುನೋವಿಗೆ ಟಿಇಎನ್ಎಸ್ ಯಂತ್ರ ಮತ್ತು ಅಲ್ಟ್ರಾಸೌಂಡ್ ಮೂಲಕ ಚಿಕಿತ್ಸೆ ನೀಡಲಾಗಿದೆ. ಬೆನ್ನಿನ ಪಕ್ಕದ ಸ್ನಾಯುಗಳಲ್ಲಿ ಸೆಳೆತ ಉಂಟಾಗಿ ಕೆಳಬೆನ್ನು ನೋವು ಕಾಣಿಸಿಕೊಂಡಿತ್ತು. ಇದಕ್ಕೆ ಇನ್ಫ್ರಾರೆಡ್ ಚಿಕಿತ್ಸೆ ಹಾಗೂ ಡೈಕ್ಲೋಫೆನಾಕ್ ಜೆಲ್ ಬಳಸಲಾಗಿದೆ
ಚಿಕಿತ್ಸೆಯ ಜೊತೆಗೆ ನಿಯಮಿತ ಔಷಧ, ವಿಶ್ರಾಂತಿ ಹಾಗೂ ಪೌಷ್ಠಿಕ ಆಹಾರವಾಗಿ ಮೊಟ್ಟೆ, ಹಾಲು, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಸೇವಿಸಲು ವೈದ್ಯರು ಶಿಫಾರಸು ಮಾಡಿದ್ದಾರೆ. ಸದ್ಯ ನಟ ದರ್ಶನ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜೈಲಾಧಿಕಾರಿಗಳು ನೀಡಿರುವ ವೈದ್ಯಕೀಯ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.









