ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (MANMUL) ಬಹುಕೋಟಿ ಹಾಲಿನ ಪುಡಿ ಕಲಬೆರಕೆ (Milk Powder Adulteration) ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ (BJP) ಕಾರ್ಯಕರ್ತರು ಗೆಜ್ಜಲಗೆರೆಯಲ್ಲಿರುವ ಮನ್ಮುಲ್ ಆವರಣದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಯನಗರ ಪೊಲೀಸ್ ಠಾಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಭೇಟಿ
ದೊಡ್ಡ ತಿಮಿಂಗಿಲಗಳ ರಕ್ಷಣೆಗೆ ಯತ್ನ: ಬಿಜೆಪಿ ಆರೋಪ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಾಯಕರು, ಈ ಹಾಲಿನ ಪುಡಿ ಕಲಬೆರಕೆ ಜಾಲದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳ ಕೈವಾಡವಿದೆ. ಆದರೆ, ಸರ್ಕಾರ ಕೇವಲ ನೆಪ ಮಾತ್ರಕ್ಕೆ ಕೆಲವರನ್ನು ಬಂಧಿಸಿ ಕೈತೊಳೆದುಕೊಳ್ಳಲು ಯತ್ನಿಸುತ್ತಿದೆ. ಸ್ಥಳೀಯ ಪೊಲೀಸರ ತನಿಖೆಯ ಮೇಲೆ ಸರ್ಕಾರದ ನೇರ ಹಸ್ತಕ್ಷೇಪವಿದ್ದು, ಇದರಿಂದ ಯಾವುದೇ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಬಯಲಾಗಲು ಕೂಡಲೇ ಇದನ್ನು ಸಿಬಿಐಗೆ ವಹಿಸಬೇಕು ಎಂದು ಪಟ್ಟುಹಿಡಿದರು.










