ಹೊಸದಿಲ್ಲಿ: ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರ ಹಿತ ಕಾಪಾಡಲು ಕೇಂದ್ರ ಸರ್ಕಾರ ಇ-ಕಾಮರ್ಸ್ ನಿಯಮಗಳಿಗೆ ತಿದ್ದುಪಡಿ ತಂದಿದೆ. ‘ಗ್ರಾಹಕ ರಕ್ಷಣೆ ತಿದ್ದುಪಡಿ ನಿಯಮಗಳು–2026’ ಮುಂಬರುವ ಜನವರಿ 1ರಿಂದ ಜಾರಿಗೆ ಬರಲಿದ್ದು, ಉತ್ಪನ್ನಗಳ ಬೆಲೆ, ಸರ್ಚ್ ರಿಸಲ್ಟ್ ಹಾಗೂ ಗ್ರಾಹಕರಿಗೆ ತೋರಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ ಹೊಂದಿದೆ.
ರಿಯಾಯಿತಿ ದರದಲ್ಲಿ ಮಾರಾಟ ಮಾಡುವಾಗ ಉತ್ಪನ್ನದ ಪ್ರಸ್ತುತ ಬೆಲೆ ಹಾಗೂ ಹಿಂದಿನ 30 ದಿನಗಳಲ್ಲಿ ಇದ್ದ ಕಡಿಮೆ ಬೆಲೆಯನ್ನು ಸ್ಪಷ್ಟವಾಗಿ ಪ್ರಕಟಿಸುವುದು ಕಡ್ಡಾಯವಾಗಲಿದೆ. ಹಣ ಪಾವತಿಸಿ ಪ್ರಚಾರ ಮಾಡಲಾಗಿರುವ ಉತ್ಪನ್ನಗಳನ್ನು ‘ಸ್ಪಾನ್ಸರ್ಡ್’ ಎಂದು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಗ್ರಾಹಕರ ಹುಡುಕಾಟಕ್ಕೆ ಸಂಬಂಧವಿಲ್ಲದ ರೀತಿಯಲ್ಲಿ ಸರ್ಚ್ ರಿಸಲ್ಟ್‌ಗಳನ್ನು ತಿರುಚುವುದಕ್ಕೂ ನಿರ್ಬಂಧ ಹೇರಲಾಗಿದೆ.
ಆಮದು ಉತ್ಪನ್ನಗಳ ಮೂಲ ದೇಶ, ಆಮದುದಾರರ ವಿವರ, ವಾರಂಟಿ ಹಾಗೂ ರೀಫಂಡ್ ನಿಯಮಗಳಂತಹ ಮಾಹಿತಿಯನ್ನು ಖರೀದಿಗೂ ಮುನ್ನ ನೀಡಬೇಕು. ಗ್ರಾಹಕರ ಒಪ್ಪಿಗೆಯಿಲ್ಲದೆ ಅವರ ಮಾಹಿತಿಯನ್ನು ನಿರ್ದಿಷ್ಟ ಉದ್ದೇಶಗಳಿಗೆ ಬಳಸುವುದಕ್ಕೂ ನಿರ್ಬಂಧವಿದೆ. ‘ಡಾರ್ಕ್ ಪ್ಯಾಟರ್ನ್’ಗಳನ್ನು ತಡೆಯಲು ಕಂಪನಿಗಳು ನಿಯಮ ಪಾಲನೆ ಮಾಡುವುದು, ವಾರ್ಷಿಕ ಸ್ವಯಂ ಪರಿಶೀಲನೆ ನಡೆಸುವುದು ಹಾಗೂ ಅನುಸರಣೆ ಪ್ರಮಾಣಪತ್ರ ಪ್ರದರ್ಶಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.










