ಮೋದಿ ಸರ್ಕಾರದಿಂದ 5 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರ ಜೀವನ ಸರ್ವನಾಶ – ಸಿಎಂ, ಡಿಕೆಶಿ, ಸುರ್ಜೇವಾಲಾ ಖಂಡನೆ..

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸರ್ಕಾರದಿಂದ 5 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರ ಜೀವನ ಸರ್ವನಾಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ (Randeep Singh Surjewala) ಜಂಟಿಯಾಗಿ ಖಂಡಿಸಿದ್ದಾರೆ.

 

ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ದಿನೇ ದಿನೇ ಹೆಚ್ಚುತ್ತಿರುವ ಆಟೋ ಗ್ಯಾಸ್‌ (Auto Gas), ಎಲ್‌ಪಿಜಿ ಸಮಸ್ಯೆ, ತೈಲ ಬೆಲೆ ಏರಿಕೆ ನಡುವೆಯೇ ನರೇಂದ್ರ ಮೋದಿ ಸರ್ಕಾರದ ನಡೆಯನ್ನ ಖಂಡಿಸಿ, ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಕಂಟ್ರಾಕ್ಟರ್ ಶವವಾಗಿ ಪತ್ತೆ – ಕೊಲೆ ಶಂಕೆ

 

ಜಂಟಿ ಹೇಳಿಕೆಯಲ್ಲಿ ಏನಿದೆ?

ಆಟೋ ಚಾಲಕರು, ಸಣ್ಣ ಹೋಟೆಲ್‌ ಮಾಲೀಕರು, ವ್ಯಾಪಾರಿಗಳು, ಗಿಗ್‌ ಕಾರ್ಮಿಕರು ಹಾಗೂ ಎಲ್‌ಪಿಜಿ ಸಮಸ್ಯೆಯಿಂದ ಜನರ ಜೀವನೋಪಾಯದ ಮೇಲೆ ಆಗಿರುವ ಪರಿಣಾಮ ಹಾಗೂ ಉದ್ಯೋಗ ನಿರಾಕರಣೆ, ಸಂಕಷ್ಟಲ್ಲಿರುವ ಲಕ್ಷಾಂತರ ಕನ್ನಡಿಗರ ಸಮಸ್ಯೆಗಳನ್ನ ಉಲ್ಲೇಖಿಸಿ ಕೇಂದ್ರ ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ. ಇದನ್ನೂ ಓದಿ: ಸಿಎಂ, ಮತ್ತವರ ಕುಟುಂಬಕ್ಕೆ ಶಿಕ್ಷೆ ಆಗುವುದು ನಿಶ್ಚಿತ: ಸ್ನೇಹಮಯಿ ಕೃಷ್ಣ

 

Auto Gas Problem

ನರೇಂದ್ರ ಮೋದಿ ಸರ್ಕಾರದ (Modi Government) ಎಲ್‌ಪಿಜಿ ಮತ್ತು ಇಂಧನ ವ್ಯವಸ್ಥೆಯ ಅಸಮರ್ಥ ನಿರ್ವಹಣೆಯು ಕರ್ನಾಟಕದಾದ್ಯಂತ ಜನರ ಜೀವನೋಪಾಯವನ್ನ ನಾಶಪಡಿಸಿದೆ. ಇದು ಕೇವಲ ನೀತಿಯ ವೈಫಲ್ಯವಲ್ಲ. ಬದಲಿಗೆ ಕೇಂದ್ರ ಬಿಜೆಪಿ ಸರ್ಕಾರದ ಉದಾಸೀನತೆ, ಅಹಂಕಾರ ಮತ್ತು ಸಂಪೂರ್ಣ ಆಡಳಿತಾತ್ಮಕ ಅಸಮರ್ಥತೆಗೆ ಸಾಕ್ಷಿಯಾಗಿದೆ. ಕರ್ನಾಟಕದ ಬಿಜೆಪಿ/ಜೆಡಿಎಸ್ ಕೇಂದ್ರ ಸಚಿವರು ಅಧಿಕಾರವನ್ನ ಆನಂದದಿಂದ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಈ ಪರಿಸ್ಥಿತಿಗೆ ಅವರು ಉತ್ತರದಾಯಿಯಾಗಿರಬೇಕು ಅಥವಾ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು.

 

ಉಪಚುನಾವಣೆಯಲ್ಲಿ ಬಿಜೆಪಿ ಮತ ಕೇಳುವ ಮುನ್ನ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲಿ..

 

1. ಕೆಲವೇ ವಾರಗಳಲ್ಲಿ 106% ಬೆಲೆ ಏರಿಕೆಯ ಆಘಾತ!

2. ಕೃತಕ ಅಭಾವ, ನೈಜ ಸಂಕಷ್ಟ!

3. 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ!

4. ವಾಣಿಜ್ಯ ಎಲ್‌ಪಿಜಿ ಬೆಲೆ ಗಗನಕ್ಕೆ – ಹೋಟೆಲ್, ಸಣ್ಣ ವ್ಯಾಪಾರಿಗಳು ಕಂಗಾಲು. ಇದು ‘ಮೋದಿ-ನಿರ್ಮಿತ’ ವಿಪತ್ತು!

5. ಕಪ್ಪು ಮಾರುಕಟ್ಟೆ ಹಾವಳಿ, ನಾಪತ್ತೆಯಾದ ಕೇಂದ್ರ ಸರ್ಕಾರ!

6. ಜೀವನೋಪಾಯದ ಬಿಕ್ಕಟ್ಟು, ನಾಯಕತ್ವದ ವೈಫಲ್ಯ. ಬಾಗಲಕೋಟೆ, ದಾವಣಗೆರೆ ಉಪಚುನಾವಣೆಗಳಲ್ಲಿ ಮತ ಕೇಳುವ ಮುನ್ನ ಈ ಪ್ರಶ್ನೆಗೆ ಉತ್ತರಿಸಲಿ ಎಂದು ಪ್ರಶ್ನೆ ಮಾಡಿದ್ದಾರೆ.

 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

1. ಕೆಲವೇ ವಾರಗಳಲ್ಲಿ 106% ಬೆಲೆ ಏರಿಕೆಯ ಆಘಾತ!

* ಮಾರ್ಚ್ 2026 ರಲ್ಲಿ ಆಟೋ ಗ್ಯಾಸ್/ಎಲ್‌ಪಿಜಿ ಬೆಲೆ ಲೀಟರ್‌ಗೆ 58 ರಿಂದ 61 ರೂ. ಇತ್ತು. ಇಂದು ಅದು 105 ರಿಂದ 120 ರೂ.ಗೆ ಏರಿಕೆಯಾಗಿದ್ದು, ಕೆಲವೇ ವಾರಗಳಲ್ಲಿ 106% ಬೆಲೆ ಏರಿಕೆಯಾಗಿದೆ.

* ಖಾಸಗಿ ಅನಿಲ ಪೂರೈಕೆ ಕೇಂದ್ರಗಳಲ್ಲಿ ಲೀಟರ್‌ಗೆ 125 ರಿಂದ 135 ರೂ. ಹಣ ವಸೂಲಿ ಮಾಡಲಾಗುತ್ತಿದೆ.

* ಸಿಎನ್‌ಜಿ ಆಟೋಗಳೂ ಸಹ ಕರ್ನಾಟಕದಾದ್ಯಂತ ತೀವ್ರ ಕೊರತೆ ಎದುರಿಸುತ್ತಿವೆ. ಬೆಲೆ ಏರಿಕೆ ಮತ್ತು ಕೊರತೆಯಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. ಇಷ್ಟಾದರೂ ಬಿಜೆಪಿ ನಾಯಕರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.

* ಕಡಿಮೆ ಬೆಲೆಗೆ ಅನಿಲ ಪೂರೈಕೆ ಮಾಡುವ ಸರ್ಕಾರಿ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಇದು ಹಣದುಬ್ಬರವಲ್ಲ, ಶ್ರಮಿಕ ವರ್ಗದ ಮೇಲೆ ನಡೆಸುತ್ತಿರುವ ಆರ್ಥಿಕ ದೌರ್ಜನ್ಯ ಎಂದು ಹೇಳಿಕೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

 

2. ಕೃತಕ ಅಭಾವ, ನೈಜ ಸಂಕಷ್ಟ!

* ಬೆಂಗಳೂರಿನಲ್ಲಿ 60 ರಿಂದ 70 ಎಲ್‌ಪಿಜಿ/ಸಿಎನ್‌ಜಿ ನಿಲ್ದಾಣಗಳಿದ್ದವು, ಈಗ ಕೇವಲ 10 ರಿಂದ 15 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅಂದರೆ ಸುಮಾರು 80% ನಿಲ್ದಾಣಗಳು ಬಂದ್ ಆಗಿವೆ!

* ನಗರದಲ್ಲಿ ‘ಟೋಟಲ್ ಗ್ಯಾಸ್’ ತನ್ನ ಎಲ್ಲಾ ಕೇಂದ್ರಗಳನ್ನು ಮುಚ್ಚಿದೆ.

* ದೈನಂದಿನ ಪೂರೈಕೆಯು 12,000 ಲೀಟರ್‌ನಿಂದ 6,000 ಲೀಟರ್‌ಗೆ ಕುಸಿದಿದೆ.

* ಪ್ರತಿ ವಾಹನಕ್ಕೆ 400 ನಷ್ಟು ಮಾತ್ರ ಇಂಧನ ಅನಿಲ ವಿತರಿಸಲಾಗುತ್ತಿದೆ.

* ಆಟೋ ಚಾಲಕರು ಬೆಳಿಗ್ಗೆ 5 ಗಂಟೆಯಿಂದ 3 ಕಿಲೋಮೀಟರ್ ಉದ್ದದ ಸಾಲಿನಲ್ಲಿ ನಿಂತರೂ ಖಾಲಿ ಕೈಯಲ್ಲಿ ಮರಳುತ್ತಿದ್ದಾರೆ. ಆಟೋ ಚಾಲಕರು ಸರತಿ ಸಾಲಿನಲ್ಲಿ ಕಳೆಯುವ ಪ್ರತಿಯೊಂದು ಗಂಟೆಯೂ ಅವರ ಕುಟುಂಬದ ಅನ್ನವನ್ನು ಕಸಿಯುತ್ತಿದೆ.

 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

3. 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ!

* ಕರ್ನಾಟಕದಲ್ಲಿ 5 ಲಕ್ಷಕ್ಕೂ ಹೆಚ್ಚು ಆಟೋಗಳಿದ್ದು, ಇವು ಸಾಮಾನ್ಯ ಜನರ ಸಂಚಾರದ ಬೆನ್ನೆಲುಬಾಗಿದೆ.

* ಈ ಆಟೋ ಚಾಲಕರು ಕಾರ್ಪೊರೇಟ್ ಸಂಸ್ಥೆಗಳಲ್ಲ, ದಿನಗೂಲಿ ನೌಕರರು. ಪ್ರತಿ ನಿತ್ಯ, ಪ್ರತಿ ಬಾಡಿಗೆಯ ಸಂಪಾದನೆ ಮೇಲೆ ಅವರ ಜೀವನ ಅವಲಂಬಿತವಾಗಿದೆ. ರಾಜ್ಯದಲ್ಲಿ ಅರ್ಧದಷ್ಟು ಆಟೋಗಳು ರಸ್ತೆಗೆ ಇಳಿಯುತ್ತಿಲ್ಲ. ಉಳಿದ ಆಟೋಗಳು ಅರ್ಧ ದಿನವನ್ನು ಸರತಿ ಸಾಲಿನಲ್ಲಿ ಕಾಲ ಕಳೆಯುತ್ತಿವೆ.

* ಮೋದಿ ಸರ್ಕಾರದ `ಪೆಟ್ರೋಲ್‌ಗೆ ಬದಲಾಗಿ’ ಎಂಬ ಪುಕ್ಕಟೆ ಸಲಹೆಯು ಅಜ್ಞಾನ ಮತ್ತು ಕ್ರೌರ್ಯದಿಂದ ಕೂಡಿದೆ. ಈಗಾಗಲೇ ಅನೇಕ ಆಟೋಗಳು ಪೆಟ್ರೋಲ್‌ನಿಂದ ಗ್ಯಾಸ್‌ಗೆ ಬದಲಾಗಿವೆ. ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಅದು ದುಬಾರಿಯಾಗಿದೆ.

 

4. ವಾಣಿಜ್ಯ ಎಲ್‌ಪಿಜಿ ಬೆಲೆ ಗಗನಕ್ಕೆ – ಹೋಟೆಲ್, ಸಣ್ಣ ವ್ಯಾಪಾರಿಗಳು ಕಂಗಾಲು. ಇದು ‘ಮೋದಿ-ನಿರ್ಮಿತ’ ವಿಪತ್ತು!

* ಏಪ್ರಿಲ್ 1, 2026 ರಂದು ವಾಣಿಜ್ಯ ಸಿಲಿಂಡರ್ ಬೆಲೆ 200 ರೂ. ಏರಿಕೆಯಾಗಿದ್ದು, ಒಂದು ಸಿಲಿಂಡರ್ ಬೆಲೆ 2,000 ರೂ. ದಾಟಿದೆ. ಪ್ರಸ್ತುತ ಒಂದು ಸಿಲಿಂಡರ್ ಬೆಲೆ 2,161 ರೂ. ಆಗಿದ್ದು, ಬೆಲೆ ಇನ್ನೂ ಏರುತ್ತಲೇ ಇದೆ. ಇತ್ತೀಚಿನ ವರದಿಗಳ ಪ್ರಕಾರ, ಕಾಳಸಂತೆಯಲ್ಲಿ ಒಂದು ಸಿಲಿಂಡರ್ 6,000 ರೂ.ಗೆ ಮಾರಾಟವಾಗುತ್ತಿದೆ.

* ಇದರಿಂದ ಲಕ್ಷಾಂತರ ಸಣ್ಣ ಹೋಟೆಲ್‌ಗಳು, ರಸ್ತೆಬದಿಯ ಡಾಬಾ, ತಳ್ಳುಗಾಡಿ ವ್ಯಾಪಾರಿಗಳು ಮತ್ತು ಫುಡ್ ಡೆಲಿವರಿ ಮಾಡುವ ಗಿಗ್ ಕಾರ್ಮಿಕರ ಜೀವನ ಅಸ್ತವ್ಯಸ್ತಗೊಂಡಿದೆ.

* ಭಾರತದಲ್ಲಿ ಎಲ್‌ಪಿಜಿ ಪೂರೈಕೆಯನ್ನು ಕೇಂದ್ರ ಸರ್ಕಾರವು ಒಎಂಸಿಗಳ (OMCs) ಮೂಲಕ ನಿಯಂತ್ರಿಸುತ್ತದೆ. ಇದರ ಸಂಪೂರ್ಣ ಜವಾಬ್ದಾರಿ ಮೋದಿ ಸರ್ಕಾರದ್ದೇ ಆಗಿದೆ. ಇಂಧನ ಅನಿಲ ಸಂಗ್ರಹಣೆ ಹಾಗೂ ಪೂರೈಕೆ ಕುರಿತ ಸಂಪೂರ್ಣ ನಿಯಂತ್ರಣ ಮೋದಿ ಸರ್ಕಾರದಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ.

* ಇಂಧನ ಅನಿಲ ಪೂರೈಕೆ ಎದುರಾಗಿರುವ ಕೊರತೆ ಬಗ್ಗೆ ಹಾಕಲಾಗಿರುವ ಫಲಕಗಳನ್ನು ಒಎಂಸಿಗಳು ನಿರ್ಲಕ್ಷಿಸಿರುವುದು ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ಕುಸಿತಕ್ಕೆ ಸಾಕ್ಷಿಯಾಗಿದೆ.

 

Shell Petrol Bunk

5. ಬ್ಲ್ಯಾಕ್‌ ಮಾರ್ಕೆಟ್‌ ಹಾವಳಿ, ನಾಪತ್ತೆಯಾದ ಕೇಂದ್ರ ಸರ್ಕಾರ!

* ಎಲ್‌ಪಿಜಿ ಮಾರಾಟ ಕಾಳಸಂತೆ ರಾಜಾರೋಷವಾಗಿ ನಡೆಯುತ್ತಿದ್ದು, ಖಾಸಗಿ ತೈಲ ಕಂಪನಿಗಳು ಇಂಧನ ತೈಲ ಬೆಲೆ ಏರಿಕೆ ಮಾಡಿವೆ. ಏಪ್ರಿಲ್ 9 ಮತ್ತು 23 ರ ಚುನಾವಣೆಯ ನಂತರ ಇಂಧನ ತೈಲ ಬೆಲೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿದೆ. ಜನರು ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರವು ಕೇವಲ ಘೋಷಣೆಗಳ ಹಿಂದೆ ಅಡಗಿಕೊಳ್ಳುತ್ತಿದೆ.

 

6. ಜೀವನೋಪಾಯದ ಬಿಕ್ಕಟ್ಟು, ನಾಯಕತ್ವದ ವೈಫಲ್ಯ

* ಇದು ಕೇವಲ ಇಂಧನದ ಬಿಕ್ಕಟ್ಟಲ್ಲ, ಇದು ಕೋಟ್ಯಂತರ ಜನರ ಬದುಕಿನ ತುರ್ತು ಪರಿಸ್ಥಿತಿ. ಕರ್ನಾಟಕದ ಶ್ರಮಿಕ ವರ್ಗವನ್ನ ಹತಾಶೆಗೆ ನೂಕಿ ಮೋದಿ ಸರ್ಕಾರ ಮೂಕ ಪ್ರೇಕ್ಷಕನಂತೆ ನೋಡುತ್ತಿದೆ.

* ಪ್ರತಿ ಖಾಲಿ ಎಲ್‌ಪಿಜಿ ಸಿಲಿಂಡರ್ ಒಂದು ಕುಟುಂಬವನ್ನು ಹಸಿವಿನ ಕೂಪಕ್ಕೆ ನೂಕುತ್ತಿದೆ.

* ಇಂಧನಕ್ಕಾಗಿ ನಿಂತಿರುವ ಪ್ರತಿ ಸರತಿ ಸಾಲು ಕೇಂದ್ರ ಸರ್ಕಾರದ ವೈಫಲ್ಯದ ಸಂಕೇತವಾಗಿದೆ.

* ಪ್ರತಿ ದಿನದ ನಷ್ಟವು ಮೋದಿ ಸರ್ಕಾರದ ನಿರ್ಲಕ್ಷದ ದುಷ್ಪರಿಣಾಮವೇ ಆಗಿದೆ.

 

ಕರ್ನಾಟಕದ ಜನರು ಈ ದ್ರೋಹವನ್ನು ಕ್ಷಮಿಸುವುದಿಲ್ಲ. ಮೋದಿ ಸರ್ಕಾರದ ಈ ಮೌನವು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಹಾಗೂ ಇತರ ರಾಜ್ಯಗಳ ಚುನಾವಣೆಗಳಲ್ಲಿ ಅವರ ಸೋಲಿನಲ್ಲಿ ಪ್ರತಿಧ್ವನಿಸಲಿದೆ ಎಂದು ಪತ್ರದಲ್ಲಿ ಆಕ್ಷೇಪಿಸಿದ್ದಾರೆ

   SHARE  

Facebook
Twitter
Telegram
WhatsApp

   TOP NEWS  

   RECENT NEWS