ಮಲೆನಾಡಿನ ಜನರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರದ ಉಡಾನ್ 6.0 ಯೋಜನೆಯ ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಿ ಬಿಡ್ ಆಹ್ವಾನಿಸಲಾಗಿದೆ. ಇದರಿಂದ ಸ್ಥಗಿತಗೊಂಡಿರುವ ವಿಮಾನ ಸೇವೆ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ. ಈ ಬಾರಿ ರಾತ್ರಿ ವಿಮಾನಗಳ ಲ್ಯಾಂಡಿಂಗ್ ಹಾಗೂ ಕಾರ್ಗೋ ಸೇವೆ ಆರಂಭಿಸುವ ಸಾಧ್ಯತೆಯೂ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಶಿವಮೊಗ್ಗ ವಿಮಾನ ನಿಲ್ದಾಣದ ಭವಿಷ್ಯದ ಬಗ್ಗೆ ಮಲೆನಾಡಿನ ಜನರಲ್ಲಿ ಇದ್ದ ಆತಂಕಕ್ಕೆ ಇದೀಗ ತೆರೆ ಬಿದ್ದಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಉಡಾನ್ 6.0 ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಿ ಟೆಂಡರ್ ಆಹ್ವಾನಿಸಿದೆ. ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಟೆಂಡರ್‌ನಲ್ಲಿ ಭಾಗವಹಿಸಲು ವಿಮಾನಯಾನ ಸಂಸ್ಥೆಗಳಿಗೆ ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗಿದೆ. ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ಸೇವೆ ಆರಂಭಿಸುವ ಮಾರ್ಗಗಳ ಆಯ್ಕೆಯನ್ನು ಸಂಸ್ಥೆಗಳ ವಿವೇಚನೆಗೆ ಬಿಡಲಾಗಿದೆ. ಬಿಡ್‌ನಲ್ಲಿ ಭಾಗವಹಿಸುವ ವಿಮಾನಯಾನ ಸಂಸ್ಥೆಗಳಿಗೆ ಉಡಾನ್ ಯೋಜನೆಯಡಿ ಸಬ್ಸಿಡಿ ಸೌಲಭ್ಯವೂ ದೊರೆಯಲಿದೆ ಎಂದು ಬಿ.ವೈ.ರಾಘವೇಂದ್ರ ವಿವರಿಸಿದ್ದಾರೆ.









