ಪಾಕಿಸ್ತಾನಿ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಉತ್ತರ ಪ್ರದೇಶದ ಮೀರತ್ನಲ್ಲಿ ಉಜೈದ್ ಖುರೇಷಿ ಎಂಬಾತನನ್ನು ವಿಶೇಷ ಕಾರ್ಯಪಡೆ ಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧನಕ್ಕೊಳಗಾಗಿರುವ ಮೊಹಮ್ಮದ್ ಸಾಜಿದ್ ಎಂಬಾತನೊಂದಿಗೆ ಉಜೈದ್ ಸಂಪರ್ಕ ಹೊಂದಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೀರತ್ನ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬನಿಯಾಪಾಡಾ ನಿವಾಸಿಯಾಗಿರುವ ಆತ ಕಳೆದ ಕೆಲವು ತಿಂಗಳುಗಳಿಂದ ಸಾಜಿದ್ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಇಬ್ಬರ ನಡುವೆ ಆನ್ಲೈನ್ನಲ್ಲಿ ನಡೆದ ಸಂಭಾಷಣೆಗಳ ಕುರಿತು ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಜೈದ್ಗೆ ಪಾಕಿಸ್ತಾನಿ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಜಾಲದೊಂದಿಗೆ ಸಂಪರ್ಕವಿತ್ತೇ ಎಂಬ ಆಯಾಮದಲ್ಲಿಯೂ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿವೆ.
ಕಾಶ್ಮೀರ ಪೊಲೀಸರು ಕಳೆದ ಹತ್ತು ತಿಂಗಳಿಂದ ಉಜೈದ್ಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ಹಿಂದೆ ಆತನನ್ನು ಬಂಧಿಸಲು ಮೀರತ್ಗೆ ಬಂದಿದ್ದರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಬಳಿಕ ಪದೇಪದೇ ವಾಸಸ್ಥಳ ಬದಲಾಯಿಸಿಕೊಂಡು ಪೊಲೀಸರಿಂದ ದೂರ ಉಳಿದಿದ್ದ ಎಂದು ವರದಿಯಾಗಿದೆ. ಬಂಧನದ ಬಳಿಕ ಆತನ ಕುಟುಂಬದ ಮನೆಯ ಬಾಗಿಲಿಗೆ ಬೀಗ ಹಾಕಲಾಗಿದ್ದು, ಕುಟುಂಬದ ಸದಸ್ಯರು ಮನೆ ತೊರೆದಿದ್ದಾರೆ ಎಂದು ತಿಳಿದುಬಂದಿದೆ.









