ನವದೆಹಲಿ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಸವಾಲು ಹಾಕಿದ್ದಾರೆ. “ನಾನು ನನ್ನ ಪದವಿ ಪ್ರಮಾಣಪತ್ರ ತೋರಿಸಲು ಸಿದ್ಧನಿದ್ದೇನೆ. ಪ್ರಧಾನಿ ಮೋದಿ ತಮ್ಮ ಪದವಿ ಪ್ರಮಾಣಪತ್ರವನ್ನು ತೋರಿಸಲು ಸಿದ್ಧರಿದ್ದಾರಾ?” ಎಂದು ಅವರು ಪ್ರಶ್ನಿಸಿದ್ದಾರೆ. ಅವರ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸಕ್ಕೆ ಹಣ ಎಲ್ಲಿಂದ ಬಂದಿದೆ ಮತ್ತು ಸಿಜೆಪಿ ಸಂಸ್ಥೆಯ ನಿಧಿಯ ಮೂಲವೇನು ಎಂದು ಸೂರತ್‌ನ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಜಿತ್ ದೀಪ್ಕೆ, ತಾವು ವಿದ್ಯಾರ್ಥಿವೇತನ ಹಾಗೂ ಶಿಕ್ಷಣ ಸಾಲದ ಮೂಲಕ ವಿದ್ಯಾಭ್ಯಾಸ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಗತ್ಯವಿದ್ದರೆ ಈ ಕುರಿತು ತನಿಖೆ ನಡೆಸಬಹುದು ಎಂದು ಅವರು ಸವಾಲು ಹಾಕಿದ್ದಾರೆ.
ತಮ್ಮ ಬಗ್ಗೆ ಪ್ರಶ್ನೆಗಳನ್ನು ಕೇಳುವ ರೀತಿಯಲ್ಲೇ ಮೊದಲು ‘ಪಿಎಂ ಕೇರ್ಸ್ ಫಂಡ್’ನ ನಿಧಿ ಮೂಲಗಳ ಬಗ್ಗೆಯೂ ಗಮನಹರಿಸಬೇಕು ಎಂದು ದೀಪ್ಕೆ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಕುರಿತು ಪ್ರಶ್ನೆ ಎತ್ತಿರುವ ಅವರು, ದೇಶದ ದೊರೆ ತನ್ನ ಪದವಿ ಪ್ರಮಾಣಪತ್ರವನ್ನು ಬಹಿರಂಗಪಡಿಸುವರೇ ಎಂದು ವ್ಯಂಗ್ಯವಾಗಿ ಕೇಳಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.










