ಶಿವಮೊಗ್ಗ: ಮಲೆನಾಡಿನ ಸ್ವರ್ಗ ಎಂದು ಕರೆಯಲಾಗುವ ಶಿವಮೊಗ್ಗ ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತದೆ. ಆದರೆ ನಿರಂತರ ಮಳೆಯಿಂದ ಉಂಟಾಗುವ ಗುಡ್ಡ ಕುಸಿತಗಳು ಕೆಲವೊಮ್ಮೆ ಭೀಕರ ದುರಂತಗಳಿಗೆ ಕಾರಣವಾಗುತ್ತಿವೆ. ತೀರ್ಥಹಳ್ಳಿ ತಾಲೂಕಿನ ಇಂದಿರಾ ನಗರದಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಶನಿವಾರ ತಡರಾತ್ರಿ ಗುಡ್ಡ ಕುಸಿದು ಈ ದುರ್ಘಟನೆ ಸಂಭವಿಸಿದೆ. ಮಲ್ಲಿಕಾರ್ಜುನ್ (35), ಅವರ ಪತ್ನಿ ನಾಗವೇಣಿ (28) ಹಾಗೂ ದಂಪತಿಯ ಮೂರು ವರ್ಷದ ಪುತ್ರ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆ ಗ್ರಾಮದವರಾದ ಈ ದಂಪತಿ ಕೆಲವೇ ದಿನಗಳ ಹಿಂದೆ ಕೆಲಸಕ್ಕಾಗಿ ತೀರ್ಥಹಳ್ಳಿಯ ಇಂದಿರಾ ನಗರಕ್ಕೆ ಆಗಮಿಸಿದ್ದರು.
ಮೃತ ದಂಪತಿಗೆ ತವರೂರಿನಲ್ಲಿ ಇನ್ನಿಬ್ಬರು ಮಕ್ಕಳಿದ್ದು, ಇದೀಗ ಅವರು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಒಂದೇ ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ದುಃಖದಲ್ಲಿದ್ದಾರೆ. ಘಟನೆಯಿಂದ ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.










