ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ಬೆಲೆ ಏರಿಕೆ ಹಾಗೂ ತೆರಿಗೆ ಹಣದ ಮೂಲಕ ಜನರನ್ನು ವಂಚಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಗುಂಡಾಪುರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರದ ಆಡಳಿತ ವೈಖರಿ ಹಾಗೂ ತಮ್ಮ ವಿರುದ್ಧ ಟೀಕೆ ಮಾಡುತ್ತಿರುವ ಸ್ಥಳೀಯ ಜನಪ್ರತಿನಿಧಿಗಳಿಗೆ ಖಡಕ್ ಉತ್ತರ ನೀಡಿದರು.
ಮಂಡ್ಯ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ನಿತ್ಯ ನನ್ನ ಬಗ್ಗೆಯೇ ಚರ್ಚೆ ಮಾಡುತ್ತಾರೆ. ಕುಮಾರಸ್ವಾಮಿ ಮಾತು ಸುಳ್ಳು, ಅವರ ಮನೆ ದೇವರು ಸುಳ್ಳು ಎಂದು ಹೀಯಾಳಿಸುತ್ತಾರೆ. ನಾನು ಕೊಲ್ಲೂರು ಮೂಕಾಂಬಿಕೆ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಎಲ್ಲೇ ಹೋದರೂ ನನ್ನಿಂದ ಬಡವರಿಗೆ ಒಳಿತಾಗಲಿ, ಜನರ ಸೇವೆ ಮಾಡಲು ಶಕ್ತಿ ಕೊಡು ಎಂದು ಬೇಡಿಕೊಳ್ಳುತ್ತೇನೆಯೇ ಹೊರತು ಸ್ವಾರ್ಥಕ್ಕಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಮಹಿಳೆಯರಿಗೆ ನೀಡುತ್ತಿರುವ 2 ಸಾವಿರ ರೂಪಾಯಿ ಅವರ ಸ್ವಂತ ಜೇಬಿನ ಹಣವಲ್ಲ, ಅದು ಸಾರ್ವಜನಿಕರ ತೆರಿಗೆ ಹಣ. ಖಜಾನೆ ಖಾಲಿಯಾಗಿರುವುದರಿಂದಲೇ ಕಳೆದ ಬಾರಿಯಂತೆ ಈ ಬಾರಿಯೂ ಬಸ್ ಪ್ರಯಾಣ ದರ ಸೇರಿದಂತೆ ಬೆಲೆ ಏರಿಕೆಯ ಬರೆ ಎಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ನನ್ನ ಬಳಿ ಒಂದು ಸಣ್ಣ ಮಗುವನ್ನು ಕರೆತಂದಿದ್ದರು. ಕಾಲಿನ ಚಿಕಿತ್ಸೆಗೆ ಇಂಡೋನೇಷ್ಯಾದಲ್ಲಿ 1 ಕೋಟಿ ಖರ್ಚಾದರೆ, ನಮ್ಮ ದೇಶದಲ್ಲಿ 14 ಕೋಟಿ ತಗಲುತ್ತದೆ ಎಂದು ಅಸಹಾಯಕತೆ ತೋಡಿಕೊಂಡರು. ಇಂತಹ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಕೇವಲ ಗ್ಯಾರಂಟಿ ಹಣದಿಂದ ಬದುಕಿಸಲು ಸಾಧ್ಯವಿಲ್ಲ. ಜನರಿಗೆ ನಿಜವಾಗಿ ಆಸರೆಯಾಗುವ ಮತ್ತು ಅವರ ಬದುಕನ್ನು ಸರಿಪಡಿಸುವ ಯೋಜನೆಗಳು ಸರ್ಕಾರದಿಂದ ಬರಬೇಕು ಎಂದು ಕಿವಿಮಾತು ಹೇಳಿದರು.
ನನಗೆ ಅಧಿಕಾರ ಇರಲಿ, ಇಲ್ಲದಿರಲಿ ಜನರು ನನ್ನ ಬಳಿ ಸಹಾಯಕ್ಕಾಗಿ ಬರುತ್ತಾರೆ. ಮನೆ ಬಾಗಿಲಿಗೆ ಬಂದವರಿಗೆ ನಿರಾಸೆ ಮಾಡಬಾರದು ಎಂಬುದು ನನ್ನ ಆಶಯ. ಈ ಹಿಂದೆ ಪೂರ್ಣ ಬಹುಮತ ಇಲ್ಲದಿದ್ದರೂ, ಬಿಜೆಪಿ ಜೊತೆಗೂಡಿ ಸರ್ಕಾರ ನಡೆಸಿದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಹಲವು ಐತಿಹಾಸಿಕ ಜನಪರ ಕೆಲಸಗಳನ್ನ ಮಾಡಿದ್ದೇನೆ. ಸರ್ಕಾರ ನಡೆಸುವುದೆಂದರೆ ಕೇವಲ ಯೋಜನೆಗಳನ್ನ ಘೋಷಣೆ ಮಾಡುವುದಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ತಮ್ಮ ಜೊತೆಗಿದ್ದು ಈಗ ಟೀಕಿಸುತ್ತಿರುವವರ ವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು, ನನ್ನೊಂದಿಗೆ ಊಟ ಮಾಡಿ, ಬೆಳೆದ ಕೆಲ ಸ್ನೇಹಿತರೇ ಇಂದು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರಿಂದ ಒಳ್ಳೆಯ ಮಾತನ್ನು ನಿರೀಕ್ಷಿಸುವುದಿಲ್ಲ. ಮೂರು ಬಾರಿ ಗಂಭೀರ ಅನಾರೋಗ್ಯದಿಂದ ಯಮನ ಸನ್ನಿಧಿವರೆಗೆ ಹೋಗಿ ಬಂದವನು ನಾನು. ಜನರ ಪ್ರೀತಿ ಮತ್ತು ದೇವರ ಆಶೀರ್ವಾದದಿಂದಲೇ ಇಂದು ಜೀವಂತವಾಗಿ ನಿಮ್ಮೆದುರು ನಿಂತಿದ್ದೇನೆ ಎಂದು ಭಾವುಕರಾಗಿ ನುಡಿದರು.









