ಇತ್ತೀಚೆಗಷ್ಟೇ ಜೊಮಾಟೊದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಡೆಲಿವರಿ ಸಿಬ್ಬಂದಿಯೊಬ್ಬರಿಗೆ ಕಹಿ ಅನುಭವ ಎದುರಾಗಿದೆ. ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಆರ್ಡರ್ ಪಡೆದಿದ್ದ ಅವರು, ಆ್ಯಪ್ನಲ್ಲಿ ಗ್ರಾಹಕರು ನಮೂದಿಸಿದ್ದ ವಿಳಾಸಕ್ಕೆ ಸರಿಯಾಗಿ ತೆರಳಿದ್ದಾರೆ. ಆದರೆ ಅಲ್ಲಿಗೆ ತಲುಪಿದ ಬಳಿಕ ಗ್ರಾಹಕರು ಕರೆ ಮಾಡಿ, ಆ್ಯಪ್ನಲ್ಲಿದ್ದ ವಿಳಾಸಕ್ಕೆ ಬದಲಾಗಿ ಮತ್ತೊಂದು ಸ್ಥಳಕ್ಕೆ ಆರ್ಡರ್ ತಂದುಕೊಡುವಂತೆ ಸೂಚಿಸಿದ್ದಾರೆ.
ಗ್ರಾಹಕರು ತಿಳಿಸಿದ ಹೊಸ ಸ್ಥಳ ಸಂಪೂರ್ಣ ನಿರ್ಜನ ಪ್ರದೇಶವಾಗಿದ್ದು, ಸುತ್ತಮುತ್ತ ಯಾರೂ ಇರಲಿಲ್ಲ ಎನ್ನಲಾಗಿದೆ. ರಾತ್ರಿ ವೇಳೆ ಒಬ್ಬಂಟಿಯಾಗಿ ಅಂತಹ ಸ್ಥಳಕ್ಕೆ ತೆರಳುವುದು ಅಪಾಯಕಾರಿ ಎಂದು ಅರಿತ ಮಹಿಳಾ ಸಿಬ್ಬಂದಿ, ತಮ್ಮ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಗ್ರಾಹಕರು ಆ್ಯಪ್ನಲ್ಲಿ ನಮೂದಿಸಿರುವ ವಿಳಾಸಕ್ಕೇ ಬಂದು ಆರ್ಡರ್ ಪಡೆದುಕೊಳ್ಳುವಂತೆ ವಿನಮ್ರವಾಗಿ ಮನವಿ ಮಾಡಿದ್ದಾರೆ.
ಮಹಿಳಾ ಡೆಲಿವರಿ ಸಿಬ್ಬಂದಿಯ ಈ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲಸದ ಜವಾಬ್ದಾರಿಯ ಜೊತೆಗೆ ತಮ್ಮ ವೈಯಕ್ತಿಕ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಅವರು ತೆಗೆದುಕೊಂಡ ನಿರ್ಧಾರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಾತ್ರಿ ವೇಳೆ ಡೆಲಿವರಿ ಮಾಡುವ ಸಿಬ್ಬಂದಿಯ ಸುರಕ್ಷತೆಯ ಬಗ್ಗೆಯೂ ಈ ಘಟನೆ ಮತ್ತೊಮ್ಮೆ ಗಮನ ಸೆಳೆದಿದೆ.










