ರೈಲು ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಮಧ್ಯ ರೈಲ್ವೆ ಹಾಗೂ ಉತ್ತರ ಮಧ್ಯ ರೈಲ್ವೆ ಕೆಲವು ಎಕ್ಸ್‌ಪ್ರೆಸ್ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಶಾಶ್ವತವಾಗಿ ಜೋಡಿಸಲು ನಿರ್ಧರಿಸಿವೆ. ಇದರಿಂದ ಪ್ರಮುಖ ನಗರಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಸೀಟುಗಳು ಲಭ್ಯವಾಗಲಿವೆ.
ದಕ್ಷಿಣ ಮಧ್ಯ ರೈಲ್ವೆಯು ಸಿಕಂದರಾಬಾದ್–ವಾಸ್ಕೋ ಡ ಗಾಮ–ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ (17039/17040) ರೈಲಿಗೆ ಒಂದು ಹೆಚ್ಚುವರಿ ಎಸಿ 3-ಟೈರ್ ಬೋಗಿಯನ್ನು ಸೇರಿಸಲಿದೆ. ಸೆಪ್ಟೆಂಬರ್ 2ರಿಂದ ಸಿಕಂದರಾಬಾದ್‌ನಿಂದ ಹೊರಡುವ 17039 ರೈಲಿನಲ್ಲಿ ಹಾಗೂ ಸೆಪ್ಟೆಂಬರ್ 3ರಿಂದ ವಾಸ್ಕೋ ಡ ಗಾಮದಿಂದ ಹೊರಡುವ 17040 ರೈಲಿನಲ್ಲಿ ಈ ಬದಲಾವಣೆ ಜಾರಿಗೆ ಬರಲಿದೆ. ಇದರೊಂದಿಗೆ ರೈಲಿನ ಎಲ್‌ಎಚ್‌ಬಿ ಬೋಗಿಗಳ ಸಂಖ್ಯೆ 19ರಿಂದ 20ಕ್ಕೆ ಏರಿಕೆಯಾಗಲಿದೆ.
ಇನ್ನು ಉತ್ತರ ಮಧ್ಯ ರೈಲ್ವೆಯೂ ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯಾಗ್‌ರಾಜ್–ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚಿಸಲಿದೆ. ಸೆಪ್ಟೆಂಬರ್ 5ರಿಂದ ಪ್ರಯಾಗ್‌ರಾಜ್‌ನಿಂದ ಹಾಗೂ ಸೆಪ್ಟೆಂಬರ್ 8ರಿಂದ ಹುಬ್ಬಳ್ಳಿಯಿಂದ ಹೊರಡುವ ರೈಲಿನಲ್ಲಿ ಈ ಹೆಚ್ಚುವರಿ ಬೋಗಿ ಲಭ್ಯವಾಗಲಿದೆ.










