ಚೌಟ್ರಿಗಳಲ್ಲಿ SIR ಫಾರಂ ತುಂಬಲು ಅವಕಾಶ ಇಲ್ಲ – ಹೆಚ್‌ಡಿಕೆ ವಿಡಿಯೋ ರಿಲೀಸ್‌ ಬೆನ್ನಲ್ಲೇ ಡಿಕೆಶಿ ವಾರ್ನಿಂಗ್‌..

ಕಲ್ಯಾಣ ಮಂಟಪಗಳಲ್ಲಿ SIR ಫಾರಂ ತುಂಬಲು ಅವಕಾಶ ಇಲ್ಲ ಎಂದು ಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಅವರು ಬಿಎಲ್‌ಓಗಳಿಗೆ (BLO) ಎಚ್ಚರಿಕೆ ನೀಡಿದ್ದಾರೆ.

 

ಕೆಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರು (H.D Kumaraswamy) ಕಲ್ಯಾಣ ಮಂಟಪಗಳಲ್ಲಿ ಸಿಬ್ಬಂದಿ SIR ಫಾರಂ ತುಂಬುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಕಲ್ಯಾಣ ಮಂಟಪಗಳಲ್ಲಿ SIR ಫಾರಂ ತುಂಬಲು ಅವಕಾಶ ಇಲ್ಲ. ಬಿಎಲ್ಓಗಳೇ ಅರ್ಜಿಗಳನ್ನ ಹಂಚಬೇಕು, ಅವರೇ ಮನೆಗೆ ಹೋಗಿ ಅರ್ಜಿ ಕೊಡಬೇಕು, ಅಲ್ಲಿಯೇ ತುಂಬಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಮನಗರದ ಚೌಟ್ರಿಯಲ್ಲಿ ಎಸ್‌ಐಆರ್‌ ಪ್ರಕ್ರಿಯೆ – ಹೆಚ್‌ಡಿಕೆಯಿಂದ ವಿಡಿಯೋ ಸಾಕ್ಷಿ ಬಿಡುಗಡೆ

 

ಕಲ್ಯಾಣ ಮಂಟಪ ಅಥವಾ ಬೇರೆಡೆ ಕುಳಿತು ಅರ್ಜಿ ತುಂಬಲು ಯಾರಿಗೂ ಅವಕಾಶ ಇರಲ್ಲ. ರಾಮನಗರ, ಜಯನಗರ, ಕುಣಿಗಲ್, ಚಾಮರಾಜಪೇಟೆ ಎಲ್ಲಾದರೂ ಸರಿ ಮನೆಗಳಿಗೆ ಹೋಗಿ ಅರ್ಜಿ ತುಂಬಬೇಕು ಎಂದು ಅವರು ಹೇಳಿದ್ದಾರೆ.

 

ಪ್ರತಿಯೊಬ್ಬ ನಾಗರೀಕನಿಗೂ ಮತದಾನದ ಹಕ್ಕು ಕೊಡಬೇಕಾಗಿರೋದು ಸರ್ಕಾರದ ಕರ್ತವ್ಯ. ವಿರೋಧ ಪಕ್ಷದವರು ಆರೋಪ ಮಾಡೋಕೆ ಇರೋದು. ನಾವು ಅಧಿಕಾರದಲ್ಲಿ ಇರೋರು, ನಮ್ಮ ಕರ್ತವ್ಯ ನಾವು ಮಾಡ್ತೀವಿ ಎಂದಿದ್ದಾರೆ.

 

ಸದ್ಯಕ್ಕಿಲ್ಲ ಸೆಷನ್‌

ಈಗ ಎಸ್‌ಐಆರ್ ನಡೆಯುತ್ತಿದೆ. ಆದ್ದರಿಂದ ಸೆಷನ್ ಕರೆಯಲು ಆಗಲ್ಲ. ಆಗಸ್ಟ್ ಎರಡನೇ ವಾರದ ತನಕ ಸೆಷನ್ ಇಲ್ಲ. ಈ ಬಗ್ಗೆ ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

 

 

ಹೆಚ್‌ಡಿಕೆ ಆರೋಪವೇನು?

ರಾಮನಗರದಲ್ಲಿ (Ramangara) ಚೌಟ್ರಿಯಲ್ಲಿ ಕುಳಿತು ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ ಎಂದು ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ. ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಅಕ್ರಮಗಳ ಕುರಿತು ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಗೃಹ ಸಚಿವರಿಗೆ ದೂರು ನೀಡುವುದಾಗಿ ತಿಳಿಸಿದ್ದರು.

ರಾಮನಗರದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಭಾರೀ ಲೋಪವಾಗುತ್ತಿದೆ. ನಿಯಮಗಳ ಪ್ರಕಾರ ಬಿಎಲ್‌ಒ (BLO)ಗಳು ಮನೆ ಮನೆಗೆ ತೆರಳಿ ಈ ಕಾರ್ಯ ಮಾಡಬೇಕು. ಆದರೆ, ರಾಮನಗರದಲ್ಲಿ ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರೇರಣೆಯಿಂದ ಬಿಎಲ್‌ಒಗಳು ಚೌಟ್ರಿಯೊಂದರಲ್ಲಿ ಕುಳಿತು ಒಂದು ನಿರ್ದಿಷ್ಟ ಸಮುದಾಯದ ಅರ್ಜಿಗಳನ್ನು ಭರ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೀಡಿಯೋ ಸಾಕ್ಷ್ಯವನ್ನೂ ಬಿಡುಗಡೆ ಮಾಡಿದ್ದರು.

   SHARE  

Facebook
Twitter
Telegram
WhatsApp

   TOP NEWS  

   RECENT NEWS