ಇಸ್ಲಾಮಾಬಾದ್ನ ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PIMS) ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಭೀಕರ ಅಗ್ನಿ ದುರಂತ ಸಂಭವಿಸಿದೆ. ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ನರ್ಸರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 14 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಮೂಲಗಳ ಪ್ರಕಾರ, ನರ್ಸರಿಯಲ್ಲಿ 16 ನವಜಾತ ಶಿಶುಗಳಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಏರ್ ಕಂಡೀಷನರ್ ಘಟಕದ ಕಂಪ್ರೆಸರ್ ಸ್ಫೋಟಗೊಂಡ ಬಳಿಕ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಒಬ್ಬ ಶಿಶುವನ್ನು ಮಾತ್ರ ಜೀವಂತವಾಗಿ ರಕ್ಷಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆಯ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಕ್ಷಣ ತನಿಖೆಗೆ ಆದೇಶಿಸಿದ್ದಾರೆ. ದುರಂತದ ನಿಖರ ಕಾರಣ ಹಾಗೂ ಆಸ್ಪತ್ರೆಯ ಸುರಕ್ಷತಾ ವ್ಯವಸ್ಥೆಗಳ ಕುರಿತು ತನಿಖೆ ನಡೆಯುತ್ತಿದೆ. ಆರಂಭಿಕ ವರದಿಗಳಲ್ಲಿ ಸಾವಿನ ಸಂಖ್ಯೆ 15 ಎಂದು ಹೇಳಲಾಗಿದ್ದರೂ, ನಂತರ ಆಸ್ಪತ್ರೆ ಹಾಗೂ ಸರ್ಕಾರಿ ಮೂಲಗಳು 14 ನವಜಾತ ಶಿಶುಗಳ ಸಾವು ದೃಢಪಡಿಸಿವೆ.









