ಬೆಂಗಳೂರು ದಕ್ಷಿಣ ನಗರ ಪಾಲಿಕೆ ರಸ್ತೆ ಬದಿಯ ಪಾರ್ಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಲು ಮುಂದಾಗಿದೆ. ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ‘ಸ್ಮಾರ್ಟ್ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆ’ಯನ್ನು ಜಾರಿಗೆ ತರಲಾಗಿದೆ. ಹಂತ ಹಂತವಾಗಿ ಈ ವ್ಯವಸ್ಥೆಯನ್ನು ಜಿಬಿಎ ವ್ಯಾಪ್ತಿಯ ಇತರ ಪ್ರದೇಶಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ.
ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1,215 ರಸ್ತೆಗಳಿದ್ದು, ಅವುಗಳ ಒಟ್ಟಾರೆ ಉದ್ದ 281 ಕಿಲೋಮೀಟರ್‌ಗಳಷ್ಟಿದೆ. ಈ ಪೈಕಿ ಸಮಗ್ರ ಅಧ್ಯಯನ ನಡೆಸಿ, ಸಂಚಾರಿ ಪೊಲೀಸರ ಅನುಮತಿ ಪಡೆದ ಬಳಿಕ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತವಾಗಿರುವ ಪ್ರಮುಖ ವಾಣಿಜ್ಯ ರಸ್ತೆಗಳನ್ನು ಗುರುತಿಸಲಾಗಿದೆ.
ಒಟ್ಟು 31.65 ಕಿಲೋಮೀಟರ್ ಉದ್ದದ 42 ಪ್ರಮುಖ ವಾಣಿಜ್ಯ ರಸ್ತೆಗಳನ್ನು ಮಾತ್ರ ಸದ್ಯದ ಪಾರ್ಕಿಂಗ್ ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ. ಹೊಸ ವ್ಯವಸ್ಥೆಯಿಂದ ರಸ್ತೆ ಬದಿಯ ಪಾರ್ಕಿಂಗ್ ಮತ್ತಷ್ಟು ನಿಯಂತ್ರಿತವಾಗುವುದರ ಜೊತೆಗೆ ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.










