ಹೊಸದಿಲ್ಲಿ: ‘ರಾಮಮಂದಿರ ಅಯೋಧ್ಯಾ ಪ್ರಸಾದ’ ಎಂಬ ಸ್ಟಿಕ್ಕರ್ ಹಾಗೂ ವಿವರಣೆಯೊಂದಿಗೆ ಸಾಮಾನ್ಯ ಸಿಹಿತಿಂಡಿಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಅವಕಾಶ ನೀಡಿದ್ದಕ್ಕಾಗಿ ಇ-ಕಾಮರ್ಸ್ ದೈತ್ಯ ಅಮೆಜಾನ್ಗೆ ಕೇಂದ್ರಿಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ₹1 ಲಕ್ಷ ದಂಡ ವಿಧಿಸಿದೆ. ತಾನು ಕೇವಲ ಮಧ್ಯವರ್ತಿ ವೇದಿಕೆ ಎಂದು ಹೇಳಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಈ ಸಂಬಂಧದ ದೂರು ಆಧರಿಸಿ ಸಿಸಿಪಿಎ ತನಿಖೆ ನಡೆಸಿತ್ತು.
ಚಂದು ಟ್ರೇಡಿಂಗ್ ಕಂಪನಿಯ ‘ಬಿಹಾರಿ ಬ್ರದರ್ಸ್’ ಬ್ರ್ಯಾಂಡ್ನಡಿ ತುಪ್ಪದ ಲಾಡು, ಖೋವಾ ಲಾಡು, ಬೂಂದಿ ಲಾಡು ಹಾಗೂ ಹಸುವಿನ ಹಾಲಿನ ಪೇಡಾಗಳನ್ನು ‘ರಾಮಮಂದಿರ ಅಯೋಧ್ಯಾ ಪ್ರಸಾದ’ ಮತ್ತು ‘ರಾಮನ ಆಶೀರ್ವಾದ’ ಎಂಬ ವಿವರಣೆಯೊಂದಿಗೆ ಅಮೆಜಾನ್ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಉತ್ಪನ್ನಗಳನ್ನು ಪ್ರಸಾದವೆಂದು ಮಾರಾಟ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಿಂದ ಯಾವುದೇ ಅಧಿಕೃತ ಅನುಮತಿ ಪಡೆದಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮುಂದಿನ 15 ದಿನಗಳೊಳಗೆ ದಂಡ ಪಾವತಿಸುವಂತೆ ಅಮೆಜಾನ್ಗೆ ಸಿಸಿಪಿಎ ನಿರ್ದೇಶಿಸಿದೆ.
ಅನುಮತಿಯಿಲ್ಲದೆ ಧಾರ್ಮಿಕ ಕೇಂದ್ರಗಳ ಹೆಸರನ್ನು ಬಳಸಿಕೊಂಡು ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಭಕ್ತರು ಅದನ್ನು ನೈಜ ಪ್ರಸಾದವೆಂದು ನಂಬಿ ಖರೀದಿಸುವ ಸಾಧ್ಯತೆ ಇದೆ ಎಂದು ಸಿಸಿಪಿಎ ಅಭಿಪ್ರಾಯಪಟ್ಟಿದೆ. ಈ ನಿಯಮವನ್ನು ಅಯೋಧ್ಯೆ ರಾಮಮಂದಿರ ಮಾತ್ರವಲ್ಲದೆ ತಿರುಪತಿ ದೇವಸ್ಥಾನ, ಮಾತಾ ವೈಷ್ಣೋದೇವಿ ಹಾಗೂ ಪುರಿ ಜಗನ್ನಾಥ ದೇವಾಲಯ ಸೇರಿದಂತೆ ಪ್ರಮುಖ 10 ಧಾರ್ಮಿಕ ಕ್ಷೇತ್ರಗಳಿಗೂ ವಿಸ್ತರಿಸಲಾಗಿದೆ. ಅಧಿಕೃತ ಪ್ರಮಾಣಪತ್ರವಿಲ್ಲದೆ ‘ಪ್ರಸಾದ’, ‘ಮಹಾಪ್ರಸಾದ’ ಅಥವಾ ‘ಭೋಗ್’ ಎಂಬ ಹೆಸರುಗಳನ್ನು ಬಳಸಿ ಉತ್ಪನ್ನಗಳನ್ನು ಪಟ್ಟಿ ಮಾಡದಂತೆ ಅಮೆಜಾನ್ಗೆ ಸೂಚಿಸಲಾಗಿದೆ.










