ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪದಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಹಾಸನ ಲೋಕಾಯುಕ್ತ ಎಸ್ಪಿಗೆ ಆದೇಶಿಸಿದೆ. 2018 ಮತ್ತು 2023ರ ಚುನಾವಣಾ ಪ್ರಮಾಣಪತ್ರಗಳಲ್ಲಿನ ಆಸ್ತಿ ವಿವರಗಳನ್ನು ಪರಿಶೀಲಿಸಿದಾಗ ಕುಟುಂಬದ ಆಸ್ತಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಆರೋಪಿಸಿ ಬಿ.ಪಿ. ಸಂದೀಪ್ ಅವರು ಖಾಸಗಿ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ. ಶಿವಪ್ರಸಾದ್, ಆರೋಪಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹಾಸನ ಲೋಕಾಯುಕ್ತ ಎಸ್ಪಿಗೆ ನಿರ್ದೇಶನ ನೀಡಿದ್ದಾರೆ. ಎರಡು ಚುನಾವಣಾ ಸಂದರ್ಭಗಳಲ್ಲಿ ಸಲ್ಲಿಸಿದ ಪ್ರಮಾಣಪತ್ರಗಳಲ್ಲಿ ಆಸ್ತಿ ಮತ್ತು ಆದಾಯದ ಕೆಲವು ವಿವರಗಳನ್ನು ಮರೆಮಾಚಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯಿದೆ-1988ರ ಕಲಂ 13(2)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಲಾಗಿದೆ.
ಇದೇ ವೇಳೆ, ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಹಾಸನ ಮಹಾನಗರ ಪಾಲಿಕೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಿಢೀರ್ ದಾಳಿ ನಡೆಸಿ ವಿವಿಧ ವಿಭಾಗಗಳ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಲೋಕಾಯುಕ್ತ ಎಸ್ಪಿ ನಂದಿನಿ ನೇತೃತ್ವದಲ್ಲಿ ಇಬ್ಬರು ಡಿವೈಎಸ್ಪಿ, ನಾಲ್ವರು ಇನ್ಸ್ಪೆಕ್ಟರ್ಗಳು ಸೇರಿದಂತೆ ಸುಮಾರು 20 ಸಿಬ್ಬಂದಿ ಕಂದಾಯ, ನೀರು ಸರಬರಾಜು, ವಿದ್ಯುತ್, ಕಾಮಗಾರಿ, ತ್ಯಾಜ್ಯ ವಿಲೇವಾರಿ ಮತ್ತು ಇ-ಸ್ವತ್ತು ವಿಭಾಗಗಳ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬಾಕಿ ಕಡತಗಳು, ಯೋಜನೆಗಳಿಗೆ ಖರ್ಚಾದ ಹಣ ಹಾಗೂ ಕಾಮಗಾರಿಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಲಾಗಿದ್ದು, ದಾಖಲೆಗಳ ಸಂಪೂರ್ಣ ಪರಿಶೀಲನೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.










