ಬೆಂಗಳೂರಿನಲ್ಲಿ ರಾಜಕಾಲುವೆ ಗಡಿ ಗುರುತಿಸುವಿಕೆ – ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಇದರ ಭಾಗವಾಗಿ ಬೆಂಗಳೂರಿನಲ್ಲಿ ಏನೆಲ್ಲ ನಡೆಯಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಬೆಳ್ಳಂದೂರು ವೇಸ್ಟ್ ವೀರ್/ಔಟ್ಲೆಟ್ನಿಂದ ಓಲ್ಡ್ ಏರ್ಪೋರ್ಟ್ ರಸ್ತೆ ವರ್ಜೀನಿಯಾ ಮಾಲ್ ವರೆಗೆ ರಾಜಕಾಲುವೆ ಸಂರಕ್ಷಣೆ, ಬಫರ್ ವಲಯ ಅಭಿವೃದ್ಧಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಭೂಸ್ವಾಧೀನಕ್ಕಾಗಿ ನಮೂನೆ 1ರ ಅಧಿಸೂಚನೆ ಹೊರಡಿಸುವ ಕುರಿತು ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಭೆ ನಡೆಯಿತು.
ಈ ಸಭೆಯಲ್ಲಿ ರಾಜಕಾಲುವೆಯ ಗಡಿಯನ್ನು ಅಧಿಕೃತ ದಾಖಲೆಗಳ ಆಧಾರದ ಮೇಲೆ ನಿಖರವಾಗಿ ಗುರುತಿಸಿ, ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ಅಂತಿಮಗೊಳಿಸುವುದು, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾಮಗಾರಿಯನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸುವ ಕುರಿತು ಸಮಗ್ರವಾಗಿ ಚರ್ಚಿಸಿದ ಆಯುಕ್ತರು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದ್ದಾರೆ.
ಮುಂದುವರಿದು ಬೆಂಗಳೂರಿನ ಈ ಭಾಗದ ರಾಜಕಾಲುವೆಯ ಮೂಲ ಗಡಿ ಹಾಗೂ ಬಫರ್ ವಲಯವನ್ನು ಅಧಿಕೃತ ದಾಖಲೆಗಳ ಆಧಾರದ ಮೇಲೆ ಗುರುತಿಸಿ, ಸ್ಥಳ ಪರಿಶೀಲನೆ ಮೂಲಕ ದೃಢೀಕರಿಸುವಂತೆ ಸೂಚಿಸಲಾಯಿತು. ಗಡಿ ಗುರುತಿಸುವ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಭೂ ದಾಖಲೆಗಳು, ಸರ್ವೇ ನಕ್ಷೆಗಳು ಹಾಗೂ ಸಂಬಂಧಿತ ಇಲಾಖೆಗಳ ದಾಖಲೆಗಳನ್ನು ಸಮನ್ವಯಗೊಳಿಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ವರ್ತೂರು ಕೋಡಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ವರ್ತೂರು-ಗುಂಜೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಕೆಆರ್ಡಿಸಿಎಲ್ ವತಿಯಿಂದ ಕೈಗೊಳ್ಳಲಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಕುರಿತು ಚರ್ಚಿಸಲಾಯಿತು.
ಈಗಾಗಲೇ ನಕ್ಷೆ ಮಂಜೂರಾತಿ ವೇಳೆ ಭೂಮಾಲೀಕರು ಪರಿತ್ಯಜನಾ ಪತ್ರದ ಮೂಲಕ ರಸ್ತೆ ಅಭಿವೃದ್ಧಿಗೆ ಕಾಯ್ದಿರಿಸಿರುವ ಜಾಗವನ್ನು ಬಳಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಅಗತ್ಯವಿರುವ ಭೂಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ಟಿಡಿಆರ್ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಕಾಮಗಾರಿಯನ್ನು ಯಾವುದೇ ವಿಳಂಬವಾಗದಂತೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಇನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಮಾದರಿಯಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ವಿವಿಧ ಪಾಲಿಕೆಗಳ ವ್ಯಾಪ್ತಿಯಲ್ಲೂ ನಡೆಯುವ ಸಾಧ್ಯತೆ ಇದೆ.
ಸಭೆಯಲ್ಲಿ ಲೋಖಂಡೆ ಸ್ನೇಹಲ್ ಸುಧಾಕರ್, ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ), ಡಾ. ಪ್ರಜ್ಞಾ ಅಮ್ಮೆಂಬಳ, ಹೆಚ್ಚುವರಿ ಆಯುಕ್ತರು (ಕಂದಾಯ), ಡಾ. ದಾಕ್ಷಾಯಿಣಿ ಕೆ., ಜಂಟಿ ಆಯುಕ್ತರು /ಉಪ ಆಯುಕ್ತರು-ಟಿಡಿಆರ್), ತಾಂತ್ರಿಕ ನಿರ್ದೇಶಕರು ಹಾಗೂ ಮುಖ್ಯ ಎಂಜಿನಿಯರರು, (ಬಿ-ಸ್ಮೈಲ್), ಸಹಾಯಕ ಕಾರ್ಯಪಾಲಕ (ಟಿಡಿಆರ್ ವಿಭಾಗ), ಕಾರ್ಯಪಾಲಕ ಎಂಜಿನಿಯರ್(ಬೃಹತ್ ನೀರುಗಾಲುವೆ ಮತ್ತು ಕೆರೆಗಳು), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಭೂದಾಖಲೆಗಳು),ನಗರ ಯೋಜಕರು, ಟಿಡಿಆರ್ ವಿಭಾಗದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಈ ಸಭೆಯಲ್ಲಿ ಹಾಜರಿದ್ದರು.










