“ನುಡಿದರೆ ಮುತ್ತಿನ ಹಾರದಂತಿರಬೇಕು…” ಎಂಬ ಜಗಜ್ಯೋತಿ ಬಸವಣ್ಣನವರ ವಚನ ಉಲ್ಲೇಖಿಸುವ ಮೂಲಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿದ್ದ ಚುನಾವಣಾ ಭರವಸೆಗಳನ್ನು ಸರ್ಕಾರ ಸಂಪೂರ್ಣವಾಗಿ ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಡಿಕೆಶಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ವಚನವನ್ನು ಉಲ್ಲೇಖಿಸಿ ನೇರವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿರುವ ಅಶೋಕ್, “ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಜಗಜ್ಯೋತಿ ಬಸವಣ್ಣನವರ ಈ ವಚನ ಕೇಳಿದ್ದೀರಾ? ‘ನುಡಿಗೆ ತಕ್ಕ ನಡೆ, ನಡೆಗೆ ತಕ್ಕ ನುಡಿ’ ಇದ್ದರೆ ಮಾತ್ರ ಆ ಪರಮೇಶ್ವರ ಮೆಚ್ಚುತ್ತಾನೆ ಎಂಬುದು ಈ ವಚನಾಮೃತದ ಸಾರಾಂಶ. ಆದರೆ ನಿಮ್ಮ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಮಾಡುತ್ತಿರುವುದೇನು?” ಎಂದು ಪ್ರಶ್ನಿಸಿದ್ದಾರೆ.
ಕಾಟಾಚಾರದ ಸಂಪುಟ ಸಭೆ, ಪುಕ್ಕಟೆ ಪ್ರಚಾರದ ಪ್ರವಾಸ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಿ.ಕೆ.ಶಿವಕುಮಾರ್ ಅವರು ಕೈಗೊಂಡಿರುವ ಪ್ರವಾಸವನ್ನು ಟೀಕಿಸಿರುವ ಆರ್.ಅಶೋಕ್, “ಯಾವ ಮುಖ ಇಟ್ಟುಕೊಂಡು ಕಲ್ಯಾಣ ಕರ್ನಾಟಕದ ಪ್ರವಾಸ ಮಾಡಲು ಹೊರಟಿದ್ದೀರಿ? ಅಲ್ಲಿ ಕಾಟಾಚಾರಕ್ಕೆ ಒಂದು ಸಂಪುಟ ಸಭೆ ಮಾಡಿದ ತಕ್ಷಣ ಅಥವಾ ಪುಕ್ಕಟೆ ಪ್ರಚಾರಕ್ಕಾಗಿ ಎರಡು ದಿನ ಪ್ರವಾಸ ಮಾಡಿಬಿಟ್ಟರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆಗಿಬಿಡುತ್ತಾ ಸ್ವಾಮಿ? ಎಂದು ಆಕ್ರೋಶ ಹೊರಹಾಕಿದ್ದಾರೆ. ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ, ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಭರವಸೆಗಳ ಪೈಕಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಆಶ್ವಾಸನೆಗಳನ್ನು ಈಡೇರಿಸಿದ್ದೀರಿ ಎಂದು ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ. ಜೊತೆಗೆ 6 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ವರ್ಷಕ್ಕೆ ₹5,000 ಕೋಟಿ ಅನುದಾನದ ಕಥೆ ಏನಾಯ್ತು?
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರಗತಿಗಾಗಿ ಪ್ರತಿ ವರ್ಷ 5,000 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು. ಹಾಗಿದ್ದರೆ, ಕಳೆದ ಎರಡು ಬಜೆಟ್ಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಒಟ್ಟು ಎಷ್ಟು ಹಣ ಮೀಸಲಿಟ್ಟಿದ್ದೀರಿ? ಅದರಲ್ಲಿ ಬಿಡುಗಡೆಯಾದ ಅನುದಾನ ಎಷ್ಟು? ಮತ್ತು ವಾಸ್ತವವಾಗಿ ಖರ್ಚಾಗಿದ್ದು ಎಷ್ಟು? ಎಂಬ ವಿವರ ಕೊಡಿ.
ಬಳ್ಳಾರಿ ಅಪೇರಲ್ ಪಾರ್ಕ್ ಮತ್ತು ಜೀನ್ಸ್ ರಾಜಧಾನಿ ಘೋಷಣೆ ಏನಾಯ್ತು?
ಬಳ್ಳಾರಿಯಲ್ಲಿ 5,000 ಕೋಟಿ ರೂಪಾಯಿ ಭಾರಿ ಮೊತ್ತದ ಅಪೇರಲ್ ಪಾರ್ಕ್ ಸ್ಥಾಪಿಸುತ್ತೇವೆ ಎಂದಿದ್ದ ಭರವಸೆ ಈಗ ಎಲ್ಲಿದೆ? ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರದ ಭಾಷಣದಲ್ಲಿ ಬಳ್ಳಾರಿಯನ್ನು ‘ಜೀನ್ಸ್ ರಾಜಧಾನಿ’ ಮಾಡುತ್ತೇವೆ ಎಂದು ಕೊಟ್ಟಿದ್ದ ಭರವಸೆ ಏನಾಯಿತು?










