ಒಂದು ಸಿನಿಮಾ ರಾತ್ರೋರಾತ್ರಿ ಸ್ಟಾರ್ ಪಟ್ಟ ತಂದುಕೊಟ್ಟರೆ, ಮತ್ತೊಂದು ಸಿನಿಮಾ ಇಡೀ ಭಾರತೀಯ ಚಿತ್ರರಂಗವೇ ಕನ್ನಡಿಗನತ್ತ ತಿರುಗಿ ನೋಡುವಂತೆ ಮಾಡಿತು. ಸ್ಯಾಂಡಲ್‌ವುಡ್‌ನ ಅಪ್ರತಿಮ ನಟ ಕಿಚ್ಚ ಸುದೀಪ್ ಅವರ ಸಿನಿಮಾ ಜರ್ನಿಯ ಆ ಎರಡು ಬಿಗ್ ಟರ್ನಿಂಗ್ ಪಾಯಿಂಟ್‌ಗಳ ನೆನಪು ಈಗ ಮತ್ತೆ ಹಸಿರಾಗಿದೆ. ಈ ಸಂಬಂಧ ಕಿಚ್ಚ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಭಾವುಕರಾಗಿದ್ದಾರೆ. ಅಷ್ಟಕ್ಕೂ ಸುದೀಪ್ ಯಾರಿಗೆ ಥ್ಯಾಂಕ್ಸ್ ಹೇಳುತ್ತಾ ಭಾವುಕರಾಗಿದ್ದಾರೆ? ಅಭಿಮಾನಿಗಳ ಎದೆಯ ಬಡಿತ ಹೆಚ್ಚಿಸಿರುವ ಆ ಪೋಸ್ಟ್ ಹಿಂದಿರುವ ಕಥೆ ಇಲ್ಲಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಸಿನಿಮಾ ಪ್ರೇಮಿಗಳ ಹಾಗೂ ಅವರ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ವೃತ್ತಿಜೀವನಕ್ಕೆ ಬಿಗ್ ಬ್ರೇಕ್ ಹಾಗೂ ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಮನ್ನಣೆ ತಂದುಕೊಟ್ಟ ಎರಡು ಸಿನಿಮಾಗಳನ್ನು ನೆನೆದು ಸುದೀಪ್ ಭಾವುಕರಾಗಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸುದೀಪ್, “ನನ್ನ ವೃತ್ತಿಜೀವನಕ್ಕೆ ಮರೆಯಲಾಗದ ಇಂತಹ ಎರಡು ರತ್ನಗಳನ್ನು ಉಡುಗೊರೆಯಾಗಿ ನೀಡಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಇವು ನನ್ನ ಹೃದಯದಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿವೆ ಎಂದು ಬರೆದುಕೊಂಡಿದ್ದಾರೆ.
2001ರಲ್ಲಿ ಬಿಡುಗಡೆಯಾದ ಓಂ ಪ್ರಕಾಶ್ ರಾವ್ ನಿರ್ದೇಶನದ ‘ಹುಚ್ಚ’ ಸಿನಿಮಾ ಸುದೀಪ್ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು. ಅಲ್ಲಿಯವರೆಗೆ ಯಶಸ್ಸಿಗಾಗಿ ಕಾಯುತ್ತಿದ್ದ ಸುದೀಪ್ ಅವರಿಗೆ ಈ ಚಿತ್ರ ರಾತ್ರೋರಾತ್ರಿ ಸ್ಟಾರ್‌ಡಮ್ ತಂದುಕೊಟ್ಟಿತು. ಚಿತ್ರದ ‘ಕಿಚ್ಚ’ ಎಂಬ ಪಾತ್ರ ಎಷ್ಟು ಜನಪ್ರಿಯವಾಯಿತೆಂದರೆ, ಅಂದಿನಿಂದ ಇಂದಿನವರೆಗೂ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ‘ಕಿಚ್ಚ ಸುದೀಪ್’ ಎಂದೇ ಕರೆಯುತ್ತಾರೆ. ಈ ಚಿತ್ರದ ನಟನೆಗಾಗಿ ಸುದೀಪ್ ಮೊದಲ ಬಾರಿಗೆ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿದ ‘ಈಗ’
ಇನ್ನು 2012ರಲ್ಲಿ ದಕ್ಷಿಣ ಭಾರತದ ಹೆಮ್ಮೆಯ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಈಗ’ ಸಿನಿಮಾ ಸುದೀಪ್ ಅವರ ಖ್ಯಾತಿಯನ್ನು ದೇಶಾದ್ಯಂತ ಪಸರಿಸುವಂತೆ ಮಾಡಿತು. ಕೇವಲ ಒಂದು ನೊಣದ ಸುತ್ತ ನಡೆಯುವ ಈ ಕಥೆಯಲ್ಲಿ ಸುದೀಪ್ ಖಳನಾಯಕನ ಪಾತ್ರದಲ್ಲಿ ಅಪ್ರತಿಮ ಅಭಿನಯ ನೀಡಿದ್ದರು. ಸುದೀಪ್ ಅವರ ಮ್ಯಾನರಿಸಂ ಹಾಗೂ ನಟನೆಗೆ ಇಡೀ ಭಾರತೀಯ ಚಿತ್ರರಂಗವೇ ಫಿದಾ ಆಗಿತ್ತು. ಈ ಚಿತ್ರ ಕೂಡ ಅವರಿಗೆ ಸಾಲು ಸಾಲು ಪ್ರಶಸ್ತಿಗಳನ್ನು ತಂದುಕೊಟ್ಟಿತ್ತು. ಇದರ ಬೆನ್ನಲ್ಲೇ ಟಾಲಿವುಡ್ ಅಂಗಳದಲ್ಲಿಯೂ ಸುದೀಪ್ ಹವಾ ಕ್ರಿಯೇಟ್ ಮಾಡಿದರು.
ತಮ್ಮ ಸಿನಿಮಾ ಪಯಣದಲ್ಲಿ ಅತ್ಯಂತ ಪ್ರಮುಖ ಘಟ್ಟಗಳಾಗಿ ನಿಲ್ಲುವ ಈ ಎರಡು ‘ಮುತ್ತು’ಗಳಂತಹ ಸಿನಿಮಾಗಳನ್ನು ತಮಗೆ ನೀಡಿದ ನಿರ್ದೇಶಕರು, ನಿರ್ಮಾಪಕರು ಹಾಗೂ ತಾಂತ್ರಿಕ ವರ್ಗಕ್ಕೆ ಸುದೀಪ್ ಈ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಸದ್ಯ ಸುದೀಪ್ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದು, “ಕಿಚ್ಚ ಎಂದರೆ ಕೇವಲ ಹೆಸರಲ್ಲ, ಅದೊಂದು ಎಮೋಷನ್” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.
ಸುದೀಪ್ ಅವರ ಪೋಸ್ಟ್‌ಗೆ ಸಾವಿರಾರು ಸಂಖ್ಯೆಯಲ್ಲಿ ಕಮೆಂಟ್ ಮಾಡುತ್ತಿರುವ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಕಿಚ್ಚನ ಮೇಲಿನ ತಮ್ಮ ಪ್ರೀತಿಯನ್ನು ಧಾರೆ ಎರೆದಿದ್ದಾರೆ. ಸುದೀಪ್ ಅವರ ಇಂಟರ್‌ನ್ಯಾಷನಲ್ ಫ್ಯಾನ್ಸ್ ಹಾಗೂ ಆಪ್ತರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, “ಹೃದಯಪೂರ್ವಕ ಅಭಿನಂದನೆಗಳು ಸುದೀಪ್ ಸರ್. ‘ಹುಚ್ಚ’ ಸಿನಿಮಾ ನಿಮ್ಮನ್ನು ಸ್ಟಾರ್ ಆಗಿ ರೂಪಿಸಿದರೆ, ‘ಈಗ’ ಸಿನಿಮಾ ನಿಮ್ಮೊಳಗಿನ ಅದ್ಭುತ ನಟನೆಯನ್ನು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಪರಿಚಯಿಸಿತು. ಇವೆರಡೂ ಚಿತ್ರಗಳು ಸದಾ ವಿಶೇಷ. ಮುಂಬರುವ ದಿನಗಳಲ್ಲಿ ಇಂತಹ ಇನ್ನೂ ಅನೇಕ ಮರೆಯಲಾಗದ ಕ್ಲಾಸಿಕ್ ಸಿನಿಮಾಗಳು ನಿಮ್ಮಿಂದ ಬರಲಿ” ಎಂದು ಹಾರೈಸಿದ್ದಾರೆ.
ಸೂಕ್ತ ಕಥೆ ಆಯ್ಕೆ ಮಾಡಿಕೊಳ್ಳಿ
ಇದೇ ವೇಳೆ ಕಿಚ್ಚನ ಅಭಿಮಾನಿಗಳು ಸುದೀಪ್ ಅವರಿಗೆ ಒಂದು ವಿಶೇಷವಾದ ಡಿಮ್ಯಾಂಡ್ ಇಟ್ಟಿದ್ದಾರೆ. “ಅದಕ್ಕೇ ಅಲ್ವಾ ನಿಮ್ಮನ್ನು ‘ಅಭಿನಯ ಚಕ್ರವರ್ತಿ’ ಅಂತ ಕರೆಯೋದು. ಲವ್ ಯೂ ಬಾಸ್ ಫಾರೆವರ್, ನೀವು ಸಿನಿಮಾರಂಗದ GOAT. ಜಪಾನ್, ಚೀನಾದಲ್ಲಿ ಭಾರತೀಯ ಸಿನಿಮಾಗಳಿಗೆ ಇರುವ ಕ್ರೇಜ್ ನಮಗೆ ಗೊತ್ತು. ಅಲ್ಲಿನ ಪ್ರೇಕ್ಷಕರು ನಿಮಗೂ ಡೈ-ಹಾರ್ಡ್ ಫ್ಯಾನ್ಸ್ ಆಗುವಂತಹ ಒಂದು ಅದ್ಭುತವಾದ, ಜಾಗತಿಕ ಮಟ್ಟದ ಸಿನಿಮಾವನ್ನು ನೀವು ಮಾಡಬೇಕು. ಕಥೆಯನ್ನು ಸೂಕ್ತವಾಗಿ ಆಯ್ಕೆ ಮಾಡಿಕೊಳ್ಳಿ, ನಿಮ್ಮ ಈ ಸಿನಿಮಾ ಪ್ರಯಾಣದಲ್ಲಿ ನಿಮ್ಮ ಫ್ಯಾನ್ಸ್ ಮತ್ತು ಸ್ನೇಹಿತರು ಸದಾ ನಿಮ್ಮ ಜೊತೆಯಿರುತ್ತಾರೆ. ನಿಮ್ಮ ನಟನೆಗೆ ಇಡೀ ವಿಶ್ವವೇ ಫಿದಾ ಆಗಬೇಕು” ಎಂದು ಸುದೀಪ್ ಅವರಲ್ಲಿ ಅಭಿಮಾನಿಗಳು ಕೇಳಿಕೊಂಡಿದ್ದಾರೆ. ಎರಡು ದಶಕಗಳ ಹಿಂದಿನ ‘ಕಿಚ್ಚ’ನ ಹಳೇ ನೆನಪುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಸುದೀಪ್ ಅವರ ಮುಂದಿನ ಸಿನಿಮಾಗಳ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.










