ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಹಬ್ಬದ ಸಂಭ್ರಮದ ನಡುವೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೊಡಗಿನ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗಣೇಶ ಮೂರ್ತಿ ಮೆರವಣಿಗೆಗೆ ಸಂಬಂಧಿಸಿದಂತೆ ಆಯೋಜಕರಿಗೆ ಹಲವು ಸೂಚನೆ ನೀಡಲಾಗಿದ್ದು, ನಿಗದಿತ ರೂಟ್, ದಿನಾಂಕ ಮತ್ತು ಸಮಯದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜನದಟ್ಟಣೆ ನಿಯಂತ್ರಣ, ವಿದ್ಯುತ್ ತಂತಿಗಳ ಸುರಕ್ಷತೆ, ಧ್ವನಿವರ್ಧಕ ಬಳಕೆ ಹಾಗೂ ವಿಸರ್ಜನಾ ಸ್ಥಳದಲ್ಲಿ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಅಷ್ಟೇ ಅಲ್ಲ, ನಿಗದಿತ ಡೆಸಿಬೆಲ್ ಮಿತಿ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಹಬ್ಬದ ಆಚರಣೆಗೆ ಸಿದ್ಧತೆ ಜೋರಾಗಿರುವ ಬೆನ್ನಲ್ಲೇ, ಪೊಲೀಸ್ ಇಲಾಖೆ ಕೂಡ ಫುಲ್ ಅಲರ್ಟ್ ಆಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಗಣೇಶ ಮೆರವಣಿಗೆ ಆಯೋಜಿಸುವ ಸಂಘಟಕರಿಗೆ ಕೊಡಗಿನ ಪೊಲೀಸ್ ಇಲಾಖೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ರೂಟ್ ಬದಲಿಸುವಂತಿಲ್ಲ, ಟೈಮಿಂಗ್ ಚೇಂಜ್ ಮಾಡುವಂತಿಲ್ಲ, ಗಣೇಶ ಮೆರವಣಿಗೆಗೆ ನಿಗದಿಪಡಿಸಿರುವ ಮಾರ್ಗ, ದಿನಾಂಕ ಮತ್ತು ಸಮಯವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಸೂಚಿಸಲಾಗಿದೆ.
ಮೆರವಣಿಗೆ ವೇಳೆ ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಆಯೋಜಕರು ಕಡ್ಡಾಯವಾಗಿ ಕ್ರೌಡ್ ಮ್ಯಾನೇಜ್ಮೆಂಟ್ಗೆ ಸಂಬಂಧಿಸಿದ ಎಸ್ಒಪಿಯನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ. ಆಯೋಜಕರಿಂದ ಅಂಡರ್ಟೇಕಿಂಗ್ ಪಡೆದು, ಜನದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ವಿವರಿಸಲಾಗುತ್ತಿದೆ.
ಗಣೇಶ ಮೆರವಣಿಗೆ ಸಾಗುವ ಮಾರ್ಗದಲ್ಲಿ ಕಡಿಮೆ ಎತ್ತರದಲ್ಲಿರುವ ವಿದ್ಯುತ್ ತಂತಿಗಳು, ವಿದ್ಯುತ್ ಕಂಬಗಳು ಹಾಗೂ ಇತರ ಸಂಪರ್ಕಗಳಿಗೆ ಮೂರ್ತಿ, ವಾಹನ ಅಥವಾ ಅಲಂಕಾರಗಳು ತಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮೂರ್ತಿ ಅಥವಾ ವಾಹನ ವಿದ್ಯುತ್ ತಂತಿಗೆ ತಾಗಿದರೆ ಶಾರ್ಟ್ ಸರ್ಕ್ಯೂಟ್ ಮಾತ್ರವಲ್ಲದೆ, ದೊಡ್ಡ ಮಟ್ಟದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಈ ಸಂಬಂಧ ಪಿಡಬ್ಲ್ಯುಡಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳನ್ನೂ ಸಿಂಗಲ್ ವಿಂಡೋ ವ್ಯವಸ್ಥೆಯಡಿ ಸಮನ್ವಯಗೊಳಿಸಲಾಗಿದೆ.
ಇನ್ನು ಗಣೇಶ ಹಬ್ಬ ಅಂದ್ರೆ ಸೌಂಡ್ ಸಿಸ್ಟಂ, ಡಿಜೆ, ಭರ್ಜರಿ ಮ್ಯೂಸಿಕ್. ಆದರೆ ಈ ಬಾರಿ ಅತಿಯಾದ ಸೌಂಡ್ಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ನಿಗದಿತ ಡೆಸಿಬೆಲ್ ಮಿತಿಯನ್ನು ಮೀರದಂತೆ ಧ್ವನಿವರ್ಧಕ ಬಳಸಬೇಕು ಎಂದು ಪೊಲೀಸ್ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ. ವಸತಿ ಪ್ರದೇಶದಲ್ಲಿ 55 ಡೆಸಿಬೆಲ್, ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬೆಲ್, ಕೈಗಾರಿಕಾ ಪ್ರದೇಶದಲ್ಲಿ 75 ಡೆಸಿಬೆಲ್, ಸೈಲೆಂಟ್ ಝೋನ್ನಲ್ಲಿ 50 ಡೆಸಿಬೆಲ್ ಮಿತಿ ನಿಗದಿಯಾಗಿದೆ. ಅಷ್ಟೇ ಅಲ್ಲ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ನಿರ್ಬಂಧ ಇದೆ.
ಪ್ರೆಷರ್ ಹಾರ್ನ್, ಪ್ರೆಷರ್ ಮೆಡ್, ಜೋರಾದ ಸೌಂಡ್ಗೆ ನೋ ಎಂಟ್ರಿ. ಹೆಚ್ಚಿನ ಶಬ್ದ ಉಂಟುಮಾಡುವ ಪ್ರೆಷರ್ ಮೆಡ್ ಸೇರಿದಂತೆ ಅತಿಯಾದ ಶಬ್ದ ಉಂಟುಮಾಡುವ ಸಾಧನಗಳ ಬಳಕೆಯನ್ನೂ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಜಿಲ್ಲಾ ಮಟ್ಟದಲ್ಲಿ ಸೌಂಡ್ ಮತ್ತು ಲೈಟ್ಸ್ ವ್ಯವಸ್ಥೆ ಮಾಡುವ ಸಂಸ್ಥೆಗಳೊAದಿಗೆ ಸಭೆ ನಡೆಸಿ, ಪ್ರೆಷರ್ ಮೆಡ್ ಬಳಕೆ ಮಾಡದಂತೆ ಸೂಚಿಸಲಾಗಿದೆ. ಜಿಲ್ಲಾಡಳಿತದಿಂದಲೂ ಈ ಸಂಬಂಧ ಆದೇಶ ಹೊರಡಿಸಲಾಗಿದ್ದು, ಆಯೋಜಕರು ಹಾಗೂ ಸೌಂಡ್ ಸಿಸ್ಟಂ ಪೂರೈಕೆದಾರರಿಗೆ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಇಲ್ಲಿ ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಏನಂದರೆ ಕೇವಲ `ಲೌಡ್ ಸ್ಪೀಕರ್ ಬಳಸದಿರಿ’ ಅಂತ ಹೇಳಿ ಪೊಲೀಸರು ಸುಮ್ಮನಾಗಿಲ್ಲ. ಬದಲಾಗಿ, ನಿಯಮವನ್ನು ಪ್ರಾಯೋಗಿಕವಾಗಿ ಹೇಗೆ ಪಾಲಿಸಬೇಕು ಅನ್ನೋದನ್ನೂ ಆಯೋಜಕರಿಗೆ ತಿಳಿಸಲಾಗುತ್ತಿದೆ. ಎಷ್ಟು ಸ್ಪೀಕರ್ಗಳು, ಎಷ್ಟು ಸಬ್ವೂಫರ್ಗಳು ಬಳಸಿದರೆ ನಿಗದಿತ ಡೆಸಿಬೆಲ್ ಮಿತಿಯೊಳಗೆ ಇರಬಹುದು ಅನ್ನೋದನ್ನ ಉದಾಹರಣೆಗಳ ಮೂಲಕ ವಿವರಿಸಲಾಗುತ್ತಿದೆ. ಹೀಗಾಗಿ ಹಬ್ಬದ ಸಂಭ್ರಮವೂ ಇರಬೇಕು, ಸೌಂಡ್ ಕೂಡ ಇರಬೇಕು. ಆದರೆ ಕಾನೂನು ನಿಗದಿಪಡಿಸಿರುವ ಮಿತಿಯೊಳಗೆ ಇರಬೇಕು ಅನ್ನೋದು ಪೊಲೀಸರ ಸ್ಪಷ್ಟ ಸಂದೇಶವಾಗಿದೆ.
ಒಟ್ಟಾರೆ, ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಪೊಲೀಸ್ ಇಲಾಖೆ ಯಾವುದೇ ಅಡ್ಡಿ ಮಾಡುತ್ತಿಲ್ಲ. ಆದರೆ ಸಂಭ್ರಮದ ಹೆಸರಿನಲ್ಲಿ ನಿಯಮ ಉಲ್ಲಂಘನೆ ಮಾಡಿದ್ರೆ ಮಾತ್ರ ಕ್ರಮ ಖಚಿತ ಅನ್ನೋ ಸಂದೇಶ ನೀಡಿದೆ.










