ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ಏಕಾಏಕಿ ಭಾರಿ ಪ್ರಮಾಣದ ನೀರು ಹಾಗೂ ಅವಶೇಷಗಳು ನುಗ್ಗಿದ ಪರಿಣಾಮ ಹಲವು ಕಾರ್ಮಿಕರು ಸಿಲುಕಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಪಿಪಲ್ಕೋಟಿ ಪ್ರದೇಶದಲ್ಲಿರುವ THDC ಯೋಜನಾ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.
ಘಟನೆ ಸಂಭವಿಸಿದ ವೇಳೆ ಸುರಂಗದೊಳಗೆ 18ರಿಂದ 19 ಮಂದಿ ಕಾರ್ಮಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 16 ಮಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದ ಕಾರ್ಮಿಕರಿಗಾಗಿ SDRF, ಪೊಲೀಸ್, CISF ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಭಾರಿ ಪ್ರಮಾಣದ ನೀರು ಮತ್ತು ಮಣ್ಣು-ಅವಶೇಷಗಳು ಏಕಾಏಕಿ ಸುರಂಗದೊಳಗೆ ನುಗ್ಗಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಸಿಲುಕಿರುವ ಪ್ರತಿಯೊಬ್ಬ ಕಾರ್ಮಿಕನನ್ನೂ ಸುರಕ್ಷಿತವಾಗಿ ಹೊರತರಲು ಸರ್ಕಾರ ಆದ್ಯತೆ ನೀಡಿದೆ.










