ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರೈತರಿಂದ ಖರೀದಿಸಿದ ಧಾನ್ಯಕ್ಕೆ ಹಣ ಪಾವತಿಸದೇ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ, “ಇದೇನಾ ನಿಮ್ಮ ಗ್ಯಾರಂಟಿ ಆಡಳಿತ?” ಎಂದು ಪ್ರಶ್ನಿಸಿರುವ ಅವರು, ರೈತರ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಮಾರ್ಚ್ ತಿಂಗಳಲ್ಲೇ ಸರ್ಕಾರ ರೈತರಿಂದ ರಾಗಿ ಮತ್ತು ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿದ್ದು, ನಿಯಮದ ಪ್ರಕಾರ 15 ದಿನಗಳೊಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಬೇಕಿತ್ತು ಎಂದು ಅಶೋಕ್ ಹೇಳಿದರು. ಆದರೆ ನಾಲ್ಕು ತಿಂಗಳು ಕಳೆದರೂ ಸುಮಾರು ₹1,200 ಕೋಟಿ ಬಾಕಿ ಉಳಿದಿದ್ದು, ಇದರಿಂದ ಲಕ್ಷಾಂತರ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಳುಮೆ, ಬಿತ್ತನೆ, ಬೀಜ, ಗೊಬ್ಬರ ಮತ್ತು ಕೂಲಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಹಣದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಳೆ ಮಾರಿದರೂ ಹಣ ಸಿಗದಿದ್ದರೆ ರೈತರು ಬದುಕುವುದು ಹೇಗೆ ಎಂದು ಪ್ರಶ್ನಿಸಿದ ಆರ್. ಅಶೋಕ್, ರೈತರ ಹಿತದೃಷ್ಟಿಯಿಂದ ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.










