ಚೆನ್ನೈನ ಎಸ್ಬಿಐ ಅಡ್ಯಾರ್ ಶಾಖೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಮೇಲೆ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಪುತ್ರಿ ಕಾಯಲ್ವಿಳಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಈ ಘಟನೆ ಬ್ಯಾಂಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಬ್ಯಾಂಕ್ ಮ್ಯಾನೇಜರ್ ಮತ್ತು ಕಾಯಲ್ವಿಳಿ ನಡುವೆ ಬ್ಯಾಂಕ್ನಲ್ಲೇ ವಾಗ್ವಾದ ನಡೆದಿದೆ. ವಾಗ್ವಾದ ತೀವ್ರಗೊಂಡ ವೇಳೆ ಕಾಯಲ್ವಿಳಿ ಏಕಾಏಕಿ ಎದ್ದು ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿರುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿದೆ.
ಪ್ರಾಥಮಿಕ ಮಾಹಿತಿಯಂತೆ, ಕಾಯಲ್ವಿಳಿ ಅವರ ಒಡೆತನದ ವಾಣಿಜ್ಯ ಕಟ್ಟಡದಲ್ಲಿದ್ದ ಹಾಳಾದ ಲಿಫ್ಟ್ನ್ನು ದುರಸ್ತಿ ಮಾಡುವಂತೆ ಬ್ಯಾಂಕ್ ಮ್ಯಾನೇಜರ್ ಮನವಿ ಮಾಡಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಅದು ಹಲ್ಲೆಯ ಮಟ್ಟಕ್ಕೆ ತಲುಪಿದೆ ಎಂದು ಆರೋಪಿಸಲಾಗಿದೆ.










