ನಟ ಹಾಗೂ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಎರಡೂ ಭುಜಗಳಲ್ಲಿ ತೀವ್ರವಾದ ರೋಟೇಟರ್ ಕಫ್ ಗಾಯಗಳಿದ್ದ ಕಾರಣ ವೈದ್ಯರು ಅವರ ಬಲ ಭುಜಕ್ಕೆ ಸುಮಾರು ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಈ ಗಾಯದ ಬಗ್ಗೆ ಕಳೆದ ವರ್ಷವೇ ಮಾತನಾಡಿದ್ದ ಪವನ್ ಕಲ್ಯಾಣ್, “ಇದು ಅಭಿಮಾನಿಗಳ ಪ್ರೀತಿಯಿಂದ ಸಿಕ್ಕ ಗಾಯ” ಎಂದು ಹಾಸ್ಯಮಯವಾಗಿ ಹೇಳಿದ್ದರು. ಇದೀಗ ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.
ಶಸ್ತ್ರಚಿಕಿತ್ಸೆಯ ಬಳಿಕ ಪವನ್ ಕಲ್ಯಾಣ್ ಅವರ ಆರೋಗ್ಯದ ಕುರಿತು ಅವರ ಪತ್ನಿ ಅನ್ನಾ ಲೆಜ್ನೇವಾ ಮಾಹಿತಿ ಹಂಚಿಕೊಂಡಿದ್ದು, ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಹಾಗೂ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಮತ್ತು ಹಿತೈಷಿಗಳು ಪವನ್ ಕಲ್ಯಾಣ್ ಶೀಘ್ರ ಗುಣಮುಖರಾಗಲೆಂದು ಶುಭ ಹಾರೈಸುತ್ತಿದ್ದಾರೆ.










