ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಇಂದು ಪ್ರಮಾಣವಚನ..

ಕರ್ನಾಟಕ ರಾಜಕಾರಣದ ‘ಟ್ರಬಲ್ ಶೂಟರ್’ ಎಂದೇ ಹೆಸರಾದ ಡಿ.ಕೆ.ಶಿವಕುಮಾರ್ ಅವರ ಬಹುದಿನಗಳ ಮುಖ್ಯಮಂತ್ರಿ ಕನಸು ಕೊನೆಗೂ ನನಸಾಗುತ್ತಿದೆ. ಇಂದು (ಜೂನ್ 3) ಸಂಜೆ 4:05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣದ ಪ್ರತಿಯೊಂದು ಲೈವ್ ಅಪ್ಡೇಟ್ಸ್‌, ಕ್ಷಣಕ್ಷಣದ ಮಾಹಿತಿ ನಮ್ಮ ಲೈವ್ ಬ್ಲಾಗ್‌ನಲ್ಲಿ ವೀಕ್ಷಿಸಿ.

 

ಹೈಕಮಾಂಡ್ ಸೂಚನೆಗೆ ಗೌರವ ನೀಡಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಹಲವು ವರ್ಷಗಳಿಂದ ರಾಜ್ಯದ ಚುಕ್ಕಾಣಿ ಹಿಡಿಯುವ ಡಿಕೆಶಿ ಕನಸು ಇಂದು ನನಸಾಗುತ್ತಿದೆ.

 

ಕನಕಪುರದಲ್ಲಿ ವಿಶೇಷ ಪೂಜೆ: ಕೆಂಕೆರಮ್ಮ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರಾರ್ಥನೆ

ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ, ಅವರ ಸ್ವಕ್ಷೇತ್ರವಾದ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸುತ್ತಿರುವ ಶುಭ ಸಂದರ್ಭದಲ್ಲಿ, ಅವರ ಆಡಳಿತ ಯಶಸ್ವಿಯಾಗಲಿ ಎಂದು ಕನಕಪುರದ ಪ್ರಸಿದ್ಧ ಶ್ರೀ ಕೆಂಕೆರಮ್ಮ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ. ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗುತ್ತಿರುವುದಕ್ಕೆ ಇಡೀ ಕನಕಪುರ ಕ್ಷೇತ್ರಾದ್ಯಂತ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

 

ಡಿಕೆಶಿ ಪಟ್ಟಾಭಿಷೇಕಕ್ಕೆ ನೆಲಮಂಗಲದಲ್ಲಿ 10 ಲಕ್ಷ ಲಾಡು ವಿತರಣೆ

ಡಿಕೆಶಿ ಪಟ್ಟಾಭಿಷೇಕಕ್ಕೆ ನೆಲಮಂಗಲದಲ್ಲಿ 10 ಲಕ್ಷ ಲಾಡು ವಿತರಣೆ

ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದನ್ನು ಆಚರಿಸಲು ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ವಿಭಿನ್ನ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 10 ಲಕ್ಷ ಲಾಡುಗಳನ್ನು ಉಚಿತವಾಗಿ ವಿತರಿಸಲು ಬೃಹತ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಸಕ ಶ್ರೀನಿವಾಸ್ ಮತ್ತು ಅವರ ಬೆಂಬಲಿಗರು ಸುಮಾರು 90,000 ಮನೆಗಳಿಗೆ ತಲಾ 750 ಗ್ರಾಂ ಲಾಡುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ 300 ನುರಿತ ಅಡುಗೆ ಭಟ್ಟರನ್ನು ಕಣಕ್ಕಿಳಿಸಲಾಗಿದೆ.

1 hour ago

ತಡರಾತ್ರಿ ಅಜ್ಜಯ್ಯನ ಮಠಕ್ಕೆ ಡಿಕೆಶಿ ಕುಟುಂಬ ಸಮೇತ ‌ಭೇಟಿ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬ ಸಮೇತರಾಗಿ ಸದ್ದಿಲ್ಲದೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ತಡರಾತ್ರಿ ಕುಟುಂಬದ ಸದಸ್ಯರೊಂದಿಗೆ ಮಠಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಮಧ್ಯರಾತ್ರಿ 2 ಗಂಟೆಯವರೆಗೂ ಮಠದಲ್ಲೇ ಉಳಿದುಕೊಂಡು ಸುದೀರ್ಘ ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಯಾವುದೇ ವಿಘ್ನಗಳು ಎದುರಾಗದಿರಲಿ ಮತ್ತು ಮುಂದಿನ ಆಡಳಿತ ಸುಸೂತ್ರವಾಗಿ ನಡೆಯಲಿ ಎಂದು ಅವರು ಅಜ್ಜಯ್ಯನ ಸನ್ನಿಧಿಯಲ್ಲಿ ವಿಶೇಷ ಸಂಕಲ್ಪ ತೊಟ್ಟು ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ಅಜ್ಜಯ್ಯನ ಪರಮ ಭಕ್ತರಾಗಿದ್ದು, ರಾಜಕಾರಣದ ಯಾವುದೇ ಪ್ರಮುಖ ಘಟ್ಟಗಳಲ್ಲೂ ಮಠಕ್ಕೆ ಭೇಟಿ ನೀಡುವುದನ್ನು ಮರೆಯುವುದಿಲ್ಲ.

1 hour ago

ನೂತನ ಸಚಿವರ ಪಟ್ಟಿ ಇಂದೇ ಫೈನಲ್: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ನೂತನ ಸಚಿವರ ಪಟ್ಟಿ ಮತ್ತು ಪ್ರಮಾಣವಚನದ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಿಗೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹೆಸರುಗಳು ಅಧಿಕೃತವಲ್ಲ. ನಾವೆಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಿ, ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಇಂದು ಮಧ್ಯಾಹ್ನದ ಹೊತ್ತಿಗೆ ಹೈಕಮಾಂಡ್ ಪಟ್ಟಿಯನ್ನು ಅಂತಿಮಗೊಳಿಸಿ ಕಳುಹಿಸಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೈಕಮಾಂಡ್‌ನಿಂದ ಪಟ್ಟಿ ಬಂದ ತಕ್ಷಣ ಅದನ್ನು ರಾಜಭವನಕ್ಕೆ ರವಾನಿಸಲಾಗುವುದು. ಅದರ ನಂತರವಷ್ಟೇ ಅಧಿಕೃತ ಪ್ರಮಾಣವಚನ ಪ್ರಕ್ರಿಯೆಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

1 hour ago

ನಾನೂ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ: ಕೆ.ಎಚ್.ಮುನಿಯಪ್ಪ

ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟ ಸೇರುವ ನಾಯಕರ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಕೆ.ಎಚ್. ಮುನಿಯಪ್ಪ ಬೆಂಗಳೂರಿನಲ್ಲಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಇಂದು 10ರಿಂದ 15 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಪಟ್ಟಿಯಲ್ಲಿ ನಾನೂ ಒಬ್ಬನಾಗಿದ್ದೇನೆ ಎಂದು ತೋರುತ್ತಿದೆ” ಎಂದು ಹೇಳುವ ಮೂಲಕ ತಮಗೆ ಸಚಿವ ಸ್ಥಾನ ಸಿಗುತ್ತಿರುವುದನ್ನು ಅವರೇ ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ಮುನಿಯಪ್ಪ ಅವರ ಈ ಹೇಳಿಕೆಯಿಂದಾಗಿ ನೂತನ ಸಂಪುಟ ಸೇರಲಿರುವ ಸಚಿವರ ಮೊದಲ ಪಟ್ಟಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

2 hours ago

ಪ್ರಮಾಣವಚನಕ್ಕೆ ಯಾರೆಲ್ಲ ಭಾಗಿ?

ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ವಾಸ್ತು ನಿಯಮಗಳ ಪ್ರಕಾರ ಪೂರ್ವಾಭಿಮುಖವಾಗಿ ವಿಶೇಷ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಸರಳವಾಗಿ ನಡೆಯಲಿರುವ ಈ ಸಮಾರಂಭಕ್ಕೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ದೇಶದ ಪ್ರಮುಖ ರಾಜಕೀಯ ಗಣ್ಯರು ಸಾಕ್ಷಿಯಾಗಲಿದ್ದಾರೆ. ಇದರೊಂದಿಗೆ ಸರ್ವಧರ್ಮ ಸಮನ್ವಯದ ಸಂಕೇತವಾಗಿ ವಿವಿಧ ಧರ್ಮಗಳ 55 ಪ್ರಮುಖ ಧರ್ಮಗುರುಗಳನ್ನು ಆಹ್ವಾನಿಸಲಾಗಿದ್ದು, ಅವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಾದದೊಂದಿಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS